ಮುಂಬೈ: ಏಕಾದಶಿ ಆಚರಣೆಗಾಗಿ ಪಂಢರಪುರಕ್ಕೆ ತೆರಳುತ್ತಿದ್ದ ಭಕ್ತರ ಹೊತ್ತ ಬಸ್ಸೊಂದು ಮುಂಬೈ ಪುಣೆ ಎಕ್ಸ್ಪ್ರೆಸ್ವೇಯಲ್ಲಿ ಅಪಘಾತಕ್ಕೆ ಒಳಗಾಗಿದ್ದು, ಐವರು ಯಾತ್ರಿಕರು ಸಾವನ್ನಪ್ಪಿರುವ ಘಟನೆ ಸೋಮವಾರ ಮಧ್ಯರಾತ್ರಿ ನಡೆದಿದೆ. ಅಡ್ನೆ ಗ್ರಾಮದ ಬಳಿ ಬಸ್ಸು ಟ್ರ್ಯಾಕ್ಟರ್ಗೆ ಡಿಕ್ಕಿ ಹೊಡೆದು ಹಳ್ಳಕ್ಕೆ ಬಿದ್ದಿದೆ. ಘಟನೆಯಲ್ಲಿ 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಬಸ್ನಲ್ಲಿದ್ದ ಯಾತ್ರಿಕರೆಲ್ಲಾ ಡೊಂಬಿವಿಲಿಯಿಂದ ಆಷಾಢ ಏಕಾದಶಿ ಆಚರಣೆಗಾಗಿ ಪಂಡರಾಪುರಕ್ಕೆ ತೆರಳುತ್ತಿದ್ದರು.
ಘಟನೆ ಕುರಿತು ಮಾತನಾಡಿರುವ ಡಿಸಿಪಿ ವಿವೇಕ್ ಪನ್ಸಾರೆ, ಪಂಡರಾಪುರದ ವಿಠ್ಠಲನ ದರ್ಶನಕ್ಕೆಂದು 54 ಪ್ರಯಾಶಿಕರು ಡೊಂಬಿವಲಿಯ ಕೇಸರ್ ಗ್ರಾಮದಿಂದ ತೆರಳುತ್ತಿದ್ದರು. ಈ ವೇಳೆ ಬಸ್ಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ರಭಸಕ್ಕೆ ಬಸ್ ಆಯ ತಪ್ಪಿ 30 ಅಡಿ ಆಳದ ಕಮರಿಗೆ ಬಿದ್ದಿದೆ.
ತಕ್ಷಣಕ್ಕೆ ತುರ್ತು ಪ್ರತಿಕ್ರಿಯೆ ತಂಡ ಸ್ಥಳಕ್ಕೆ ಆಗಿಮಿಸಿತು. ಹೆದ್ದಾರಿಯ ಮುಂಬೈ ಲೋನಾವಾಲಾ ಲೇನ್‌ನಲ್ಲಿ ಸುಮಾರು ಮೂರು ಗಂಟೆಗಳ ಕಾಲ ಸಂಚಾರ ಸ್ಥಗಿತಗೊಳಿಸಲಾಯಿತು. ಗಾಯಾಳುಗಳನ್ನು ಎಂಜಿಎಂ ಆಸ್ಪತ್ರೆ ಮತ್ತು ಪನ್ವೇಲ್‌ನ ಗ್ರಾಮೀಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ.
ಕ್ರೇನ್ ಸಹಾಯದಿಂದ ಬಸ್ ಮೇಲೆತ್ತಲಾಗಿದೆ. ಸಾಮಾನ್ಯವಾಗಿ ಎಕ್ಸ್ಪ್ರೆಸ್ವೇಗೆ ಟ್ರ್ಯಾಕ್ಟರ್ಗೆ ಪ್ರವೇಶವಿಲ್ಲ. ಈ ಹಿನ್ನಲೆ ಟ್ರ್ಯಾಕ್ಟರ್ ಹೇಗೆ ಅಲ್ಲಿ ಪ್ರವೇಶಿಸಿತು. ದುರಂತಕ್ಕೆ ಕಾರಣವಾದ ಸಂದರ್ಭಗಳು ಏನು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಪಘಾತದಲ್ಲಿ ಸಾವನ್ನಪ್ಪಿದವರ ಮೃತರ ಗುರುತು ಇನ್ನು ಅಧಿಕೃತವಾಗಿ ಬಹಿರಂಗವಾಗಿಲ್ಲ. ತನಿಖೆ ಮುಂದುವರೆಯುತ್ತಿದೆ ಎಂದರು.
ಇದನ್ನೂ ಓದಿ: ಜಮ್ಮು-ಕಾಶ್ಮೀರ: ಉಗ್ರರೊಂದಿಗೆ ಗುಂಡಿನ ಕಾಳಗ - ಅಧಿಕಾರಿ ಸೇರಿ ನಾಲ್ವರು ಯೋಧರು ಹುತಾತ್ಮ