ಹೈದರಾಬಾದ್ (ತೆಲಂಗಾಣ): ಮಧ್ಯಮ ವರ್ಗದ ಕುಟುಂಬದ ಮಕ್ಕಳು ಭವಿಷ್ಯದ ಬಗ್ಗೆ ಅನೇಕ ಅನೇಕ ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ಆ ಕನಸನ್ನು ಕನಸಾಗಿಸಲು ಭರವಸೆ ಎಂಬ ದಾರಿಯಲ್ಲಿ ಸಾಗುತ್ತಿರುತ್ತಾರೆ. ಆ ಕನಸುಗಳನ್ನು ನನಸಾಗಿಸಿಕೊಳ್ಳಲು ಕಷ್ಟಪಟ್ಟು ಶ್ರಮವಹಿಸುತ್ತಾರೆ. ಅಷ್ಟೇ ಅಲ್ಲ ತಾವೂ ಇಟ್ಟ ಗುರಿಯನ್ನು ತಲುಪಲು ಅನೇಕ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರೆ. ಒಂದೋ ಎರಡೋ ಸೋಲುಗಳು ಎದುರಾದಾಗ ‘ಇದೆಲ್ಲ ನಮ್ಮಿಂದಲ್ಲ ಆಗಲ್ಲ ಬೀಡು’ ಎಂದುಕೊಂಡು ಮನನೊಂದು ಕೊಳ್ಳುತ್ತಾರೆ. ಆದ್ರೆ ಈ ಇಬ್ಬರು ಯುವಕರ ಕಥೆಯೇ ಬೇರೆ.. ಸೋಲುಗಳನ್ನು ಸವಾಲಾಗಿ ಸ್ವೀಕರಿಸಿ ತಮ್ಮ ಗುರಿಯನ್ನು ತಲುಪಿದ್ದಾರೆ. ಅವರಲ್ಲಿ ಒಬ್ಬರಾದ ಶ್ರೀಕಾಂತ್ ಒಂಬತ್ತು ಉದ್ಯೋಗಗಳನ್ನು ಪಡೆಯುವಲ್ಲಿ ಯಶಸ್ಸು ಸಾಧಿಸಿದ್ದಾರೆ. ಇನ್ನೊಬ್ಬ ಯುವಕ ಉದಯ್ ಹಸನ್ ಒಂದೇ ವರ್ಷದಲ್ಲಿ ಎಂಟು ಉದ್ಯೋಗಗಳನ್ನು ಪಡೆದುಕೊಂಡು ಯುವಕರಿಗೆ ಸ್ಪೂರ್ತಿಯಾಗಿದ್ದಾರೆ.
ಸಹೋದರಿಯ ಸಹಾಯ, ಸ್ನೇಹಿತರ ಪ್ರೋತ್ಸಾಹ: ನಲ್ಗೊಂಡ ಜಿಲ್ಲೆಯ ಚಿಂತಪಲ್ಲಿ ಮೂಲದ ಶ್ರೀಕಾಂತ್ ಮಧ್ಯಮ ವರ್ಗದ ಕುಟುಂಬದ ಹಿನ್ನೆಲೆಯಿಂದ ಬಂದವರು. 2014ರಲ್ಲಿ ತಂದೆ, 2019ರಲ್ಲಿ ತಾಯಿ ಮೃತಪಟ್ಟಿದ್ದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ಅಕ್ಕ ಶ್ರೀಲಕ್ಷ್ಮಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ನಿರ್ವಹಿಸಿ ಜೀವನಕ್ಕೆ ಆಧಾರ ಸ್ತಂಭವಾಗಿದ್ದಾರೆ. ಓದು ಮುಂದುವರೆಸುತ್ತಲೇ ತನ್ನ ಕಿರಿಯ ಸಹೋದರ ಶ್ರೀಕಾಂತನನ್ನು ಓದಿಸುತ್ತಿದ್ದರು ಅಕ್ಕ ಶ್ರೀಲಕ್ಷ್ಮಿ.
ಸಹೋದರಿಯ ಪ್ರೋತ್ಸಾಹದಿಂದ 2020ರಲ್ಲಿ ಎಂಬಿಎ ಮುಗಿಸಿದ ಶ್ರೀಕಾಂತ್, 2021ರಲ್ಲಿ ಹೈದರಾಬಾದ್‌ನಲ್ಲಿ ಬ್ಯಾಂಕಿಂಗ್ ತರಬೇತಿ ಕೇಂದ್ರಕ್ಕೆ ಸೇರಿಕೊಂಡರು. ಮೊದಲ ಪ್ರಯತ್ನದಲ್ಲಿ ಬರೆದ ಪರೀಕ್ಷೆಗಳ ಫಲಿತಾಂಶ ನಿರಾಶಾದಾಯಕವಾಗಿದ್ದರೂ ಎದೆಗುಂದಲಿಲ್ಲ. ನೋಟಿಫಿಕೇಶನ್ ಬಂದಾಗಲೆಲ್ಲಾ ಪರೀಕ್ಷೆ ಬರೆಯುತ್ತಿದ್ದರು. 2022 ರಲ್ಲಿ ಸೌತ್ ಇಂಡಿಯಾ ಬ್ಯಾಂಕ್ಗೆ (ಖಾಸಗಿ) ಸೇರಿದರು. ಏಳು ತಿಂಗಳ ನಂತರ ರಾಜೀನಾಮೆ ನೀಡಿ ಮತ್ತೆ ತಯಾರಿ ಆರಂಭಿಸಿದರು. ಅವರು 2022 ರಲ್ಲಿ ಎರಡು ಉದ್ಯೋಗಗಳನ್ನು ಪಡೆದರೂ ಸಹ ಅವರು ಆ ಉದ್ಯೋಗಗಳಿಗೆ ಸೇರಲಿಲ್ಲ. 2023 ರಲ್ಲಿ ಬಿಡುಗಡೆಯಾದ ಹಲವು ಅಧಿಸೂಚನೆಗಳಿಗೆ ಸಂಬಂಧಿಸಿದ ಲಿಖಿತ ಪರೀಕ್ಷೆಗಳಿಗೆ ಹಾಜರಾದರು. ಇತ್ತೀಚೆಗೆ ಆ ಪರೀಕ್ಷೆಗಳ ಫಲಿತಾಂಶಗಳನ್ನು ಬಿಡುಗಡೆ ಮಾಡಲಾಯಿತು. ಶ್ರೀಕಾಂತ್ ಸುಮಾರು ಏಳು ಉದ್ಯೋಗಗಳಿಗೆ ಆಯ್ಕೆ ಆಗಿ ಇತರರಿಗೆ ಮಾದರಿ ಆದರು.
ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕ್ರೆಡಿಟ್ ಅಧಿಕಾರಿ, ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ಲೆಕ್ಕಾಧಿಕಾರಿ, ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಕಂಪನಿಯಲ್ಲಿ ಆಡಳಿತಾಧಿಕಾರಿ (ಹಣಕಾಸು ಖಾತೆಗಳ ತಜ್ಞರು), IBPS ಕ್ಲರ್ಕ್ ಬ್ಯಾಂಕ್ ಆಫ್ ಮಹಾರಾಷ್ಟ್ರ, ಉದ್ಯೋಗಿಗಳ ರಾಜ್ಯ ವಿಮಾ ನಿಗಮದಲ್ಲಿ ಉನ್ನತ ವಿಭಾಗದ ಗುಮಾಸ್ತ, ಸೌತ್ ಇಂಡಿಯನ್ ಬ್ಯಾಂಕ್ PO (Pvt.), ಕರೀಂನಗರ ಡಿಸಿಸಿಬಿಯಲ್ಲಿ ಕ್ಲರ್ಕ್, RRB (ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು) PO, RRB ಕ್ಲರ್ಕ್ ಆಗಿ ಉದ್ಯೋಗಗಳನ್ನು ಪಡೆದು, ಮೇರು ಸಾಧನೆ ಮಾಡಿದ್ದಾರೆ.
ನಾನು ಏಕಲವ್ಯ ಮಾದರಿ ಶಾಲೆಗೆ ಸೇರಲು ಬಯಸುತ್ತೇನೆ. ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಮತ್ತು ಆರ್‌ಬಿಐ ಸಹಾಯಕರ ಅಂತಿಮ ಫಲಿತಾಂಶವನ್ನು ಪ್ರಕಟಿಸಬೇಕಿದೆ. ಫಲಿತಾಂಶಗಳನ್ನು ಪ್ರಕಟಗೊಂಡ ಬಳಿಕ ಯಾವುದಕ್ಕೆ ಸೇರಬೇಕೆಂದು ನಿರ್ಧರಿಸುತ್ತೇನೆ. ನನ್ನ ಅಕ್ಕ ಶ್ರೀಲಕ್ಷ್ಮಿ ಮತ್ತು ಸ್ನೇಹಿತ ಶ್ರೀಶೈಲಂ ಅವರು ನನ್ನ ಬೆಂಬಲವಾಗಿ ನಿಂತು ಉದ್ಯೋಗ ಯಾವ ರೀತಿ ಪಡೆಯಬೇಕು ಎಂಬುದಕ್ಕೆ ಮಾರ್ಗದರ್ಶನ ನೀಡಿದರು ಮತ್ತು ನನ್ನ ಯಶಸ್ಸಿನ ಹಿಂದೆ ಅವರ ಪ್ರೋತ್ಸಾಹವಿದೆ ಎಂದು ಶ್ರೀಕಾಂತ್ ಹೇಳಿದರು.
ಮೊದಲ ಪ್ರಯತ್ನ ನಿರಾಸೆ ಮೂಡಿಸಿತ್ತು: ಇನ್ನು ಖಮ್ಮಂ ಜಿಲ್ಲೆಯ ಮಧಿರಾದಿಂದ ಉದಯ್ ಹಸನ್ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವರು. ತಂದೆ ನಾಗೇಶ್ವರ ರಾವ್ ಖಾಸಗಿ ಶಾಲಾ ಶಿಕ್ಷಕರು. ತಾಯಿ ಸೃಜನಕುಮಾರಿ ಗೃಹಿಣಿ. ತಂದೆಯ ಅಲ್ಪ ಆದಾಯದಲ್ಲಿ ಕುಟುಂಬ ಬದುಕುತ್ತಿತ್ತು. ಉದಯ್ ಹಸನ್ ಅವರು ಉನ್ನತ ಸ್ಥಾನಕ್ಕೆ ಏರದ ಹೊರತು ನಮ್ಮ ಕುಟುಂಬದ ಆರ್ಥಿಕ ಸ್ಥಿತಿ ಬದಲಾಗುವುದಿಲ್ಲ ಎಂಬ ಅಭಿಪ್ರಾಯದೊಂದಿಗೆ ಕಷ್ಟಪಟ್ಟು ಪರೀಕ್ಷೆಗಳಿಗೆ ತಯಾರಿ ನಡೆಸಿದರು.
2022 ರಲ್ಲಿ, ಅವರು ಬಸರಾ ಟ್ರಿಪಲ್ ಐಟಿಯಲ್ಲಿ ತಮ್ಮ ಬಿ.ಟೆಕ್ ಪೂರ್ಣಗೊಳಿಸಿದರು. ಆ ಬಳಿಕ ಬ್ಯಾಂಕ್ ಉದ್ಯೋಗ ಪಡೆಯಲು ತರಬೇತಿಗಾಗಿ ಹೈದರಾಬಾದ್‌ಗೆ ಬಂದಿದ್ದರು. ಸೇರಿದ ಮೊದಲ ವರ್ಷವೇ ಎಂಟು ನೋಟಿಫಿಕೇಶನ್ ಬಂದಿದ್ದವು. ತಾವು ಹಾಕಿದ ಎಲ್ಲ ಪರೀಕ್ಷೆಗಳನ್ನು ಉದಯ್ ಹಸನ್ ಎದುರಿಸಿದ್ದರು. 2022 ರಲ್ಲಿ ಅವರು 'SBI PO' ಉದ್ಯೋಗ ಪರೀಕ್ಷೆಯಲ್ಲಿ ಉನ್ನತ ಶ್ರೇಣಿ ಪಡೆಯುವ ಮೂಲಕ ಸಂದರ್ಶನಕ್ಕೆ ಹಾಜರಾಗಿದ್ದರು. ಅಂತಿಮ ಫಲಿತಾಂಶದಲ್ಲಿ ನಿರಾಸೆ ಅನುಭವಿಸಿದರೂ ಹಿಂದೆ ಸರಿಯಲಿಲ್ಲ. 2023 ರಲ್ಲಿ, ಕ್ಲರಿಕಲ್, ಪಿಒ ಮತ್ತು ವಿಮಾ ಕಂಪನಿಗಳಿಗೆ ಸಂಬಂಧಿಸಿದ ಎಂಟು ಅಧಿಸೂಚನೆಗಳು ಬಂದಿದ್ದರಿಂದ ಅವರ ಉತ್ಸಾಹವು ದ್ವಿಗುಣಗೊಂಡಿತ್ತು. ಅವರು ಹೆಚ್ಚು ಶ್ರಮಿಸಿದರು. ಅವರು RRB ಕ್ಲರ್ಕ್, RRB PO, APGVB ನಲ್ಲಿ ಕ್ಲರ್ಕ್, RBI ಸಹಾಯಕ, SBI PO, IBPS PO (ಕೆನರಾ ಬ್ಯಾಂಕ್), ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ (ಕ್ಲರ್ಕ್) ಗೆ ಆಯ್ಕೆಯಾದರು.
ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿಯ ಅಂತಿಮ ಫಲಿತಾಂಶದಲ್ಲಿ ತನಗೆ ಕೆಲಸ ಸಿಕ್ಕಿದ್ದು, ಇತ್ತೀಚೆಗಷ್ಟೇ ಆ ಕಂಪನಿಯಲ್ಲಿ ಅಡ್ಮಿನಿಸ್ಟ್ರೇಟಿವ್ ಆಫೀಸರ್ ಹುದ್ದೆಗೆ ಸೇರಿರುವುದಾಗಿ ಉದಯಹಸನ್ ಹೇಳಿದ್ದಾರೆ. ಇದನ್ನು ಮುಂದುವರೆಸಿಕೊಂಡು ಆರ್‌ಬಿಐ ಗ್ರೇಡ್-ಬಿ ಉದ್ಯೋಗ ಪಡೆಯುವ ಗುರಿ ಹೊಂದಿದ್ದು, ಅದನ್ನು ಸಾಧಿಸುವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಓದಿ: ವಿಧಾನ ಪರಿಷತ್ ಸಚಿವಾಲಯದಲ್ಲಿ ಉದ್ಯೋಗ: ಅರ್ಜಿ ಸಲ್ಲಿಕೆಗೆ ಎರಡೇ ದಿನ ಬಾಕಿ - KPSC Recruitment