ನವದೆಹಲಿ: ದೆಹಲಿ ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ವ್ಯಾಪಕ ಭ್ರಷ್ಟಾಚಾರ ಆರೋಪದ ಮೇಲೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ನಿನ್ನೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಬಂಧಿಸಿದ್ದಾರೆ. ಈ ಕ್ರಮ ಖಂಡಿಸಿ ಇಂದು ಬಿಜೆಪಿ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಲಾಗುವುದು ಎಂದು ಆಮ್ ಆದ್ಮಿ ಪಕ್ಷ (ಎಎಪಿ) ತಿಳಿಸಿದೆ.
''ಬಿಜೆಪಿ ಕೇಂದ್ರದ ತನಿಖಾ ಸಂಸ್ಥೆಗಳನ್ನು ಕಳುಹಿಸಿ ಅರವಿಂದ್ ಕೇಜ್ರಿವಾಲ್‌ರನ್ನು ಬಂಧಿಸಿದೆ. ಇದು ಪ್ರಜಾಪ್ರಭುತ್ವದ ಕೊಲೆ. ಬೆಳಿಗ್ಗೆ 10ಕ್ಕೆ ದೆಹಲಿಯಲ್ಲಿ ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ'' ಎಂದು ದೆಹಲಿ ಸಚಿವ ಗೋಪಾಲ್ ರೈ ಹೇಳಿದರು.
ಪ್ರತಿಪಕ್ಷಗಳು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತವೆಯೇ ಎಂಬ ಪ್ರಶ್ನೆಗೆ, "ಶುಕ್ರವಾರ ಬಹಿರಂಗ ಪ್ರತಿಭಟನೆ ನಡೆಯಲಿದೆ. ಸರ್ವಾಧಿಕಾರದ ವಿರುದ್ಧ ಯಾರೇ ಇದ್ದರೂ ಎಲ್ಲರೂ ಸೇರಬಹುದು, ಅವರೆಲ್ಲರಿಗೂ ಸ್ವಾಗತ" ಎಂದರು.
ಎಎಪಿ ನಾಯಕ ಅತಿಶಿ ಪ್ರತಿಕ್ರಿಯಿಸಿ, "ಇಂಡಿಯಾ ಒಕ್ಕೂಟ, ಕಾಂಗ್ರೆಸ್ ಸದಸ್ಯರು ಬೆಂಬಲ ನೀಡುವುದಾಗಿ ಭರವಸೆ ಕೊಟ್ಟಿದ್ದಾರೆ" ಎಂದು ಹೇಳಿದರು.
ಜಾರಿ ನಿರ್ದೇಶನಾಲಯದ ವಿರುದ್ಧ ಪ್ರತಿಭಟನೆ: ಅಬಕಾರಿ ನೀತಿ ಪ್ರಕರಣದಲ್ಲಿ ಇಡಿ ಅಧಿಕಾರಿಗಳ ತಂಡವು ಕೇಜ್ರಿವಾಲ್‌ರನ್ನು ಬಂಧಿಸಿದ ನಂತರ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಕೇರಳದ ಎರ್ನಾಕುಲಂನಲ್ಲಿ ಗುರುವಾರ ರಾತ್ರಿ ಪ್ರತಿಭಟನೆ ನಡೆಸಿದರು.
ಎಎಪಿಯ ಇಬ್ಬರು ಹಿರಿಯ ನಾಯಕರಾದ ಮನೀಶ್ ಸಿಸೋಡಿಯಾ, ಸಂಜಯ್ ಸಿಂಗ್ ಈ ಪ್ರಕರಣದಲ್ಲಿ ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದಾರೆ. ದೆಹಲಿಯ ಉಪ ಮುಖ್ಯಮಂತ್ರಿಯಾಗಿದ್ದ ಸಿಸೋಡಿಯಾರನ್ನು ಫೆಬ್ರವರಿ 26ರಂದು ಹಲವಾರು ಸುತ್ತಿನ ವಿಚಾರಣೆಯ ನಂತರ ಸಿಬಿಐ ಬಂಧಿಸಿತ್ತು. ಅಕ್ಟೋಬರ್ 5ರಂದು ರಾಜ್ಯಸಭಾ ಸದಸ್ಯರಾಗಿರುವ ಸಂಜಯ್ ಸಿಂಗ್ ಅವರನ್ನು ಇ.ಡಿ ಬಂಧಿಸಿತ್ತು.
ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಕೇಜ್ರಿವಾಲ್: ಇ.ಡಿ ಬಂಧನ ವಿರುದ್ಧ ಕೇಜ್ರಿವಾಲ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಇದನ್ನೂ ಓದಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬಂಧನ: ಕಾನೂನು ಹೇಳುವುದು ಏನು? - Kejriwal Arrest What Next