ಹೈದರಾಬಾದ್: ಲೋಕಸಭೆ ಚುನಾವಣೆ ಕಾವು ಹೆಚ್ಚಾಗುತ್ತಿದೆ. ಸಾಮಾಜಿಕ ಮಾಧ್ಯಮದಲ್ಲಿ ಚುನಾವಣಾ ಪ್ರಚಾರ, ರಾಜಕೀಯ ಚರ್ಚೆ, ಜಟಾಪಟಿ ಜೋರಾಗಿದೆ. ಇದರ ನಡುವೆ ಬಾಲಿವುಡ್ ಸೂಪರ್‌ಸ್ಟಾರ್ ಅಮೀರ್ ಖಾನ್ ನಿರ್ದಿಷ್ಟ ರಾಜಕೀಯ ಪಕ್ಷವನ್ನು ಬೆಂಬಲಿಸಿರುವ ರೀತಿಯ ವಿಡಿಯೋ ವೈರಲ್ ಆಗಿದೆ. ಆದರೆ, ಈ ವಿಡಿಯೋ ಸುಳ್ಳು ಮತ್ತು ನಕಲಿ ಎಂದು ಅಮೀರ್ ಖಾನ್ ಸ್ಪಷ್ಟಪಡಿಸಿದ್ದಾರೆ.
ರಾಜಕೀಯ ಕುರಿತ ವಿಡಿಯೋ ಬೆಳಕಿಗೆ ಬಂದ ಕೂಡಲೇ ಅಮೀರ್ ಖಾನ್ ಅವರ ಅಧಿಕೃತ ವಕ್ತಾರರು ಹೇಳಿಕೆ ಬಿಡುಗಡೆ ಮಾಡಿದ್ದಾರೆ. 35 ವರ್ಷಗಳ ವೃತ್ತಿ ಜೀವನದುದ್ದಕ್ಕೂ ಬಾಲಿವುಡ್ ನಟ ಯಾವುದೇ ರಾಜಕೀಯ ಪಕ್ಷವನ್ನು ಸಾರ್ವಜನಿಕವಾಗಿ ಬೆಂಬಲಿಸಿಲ್ಲ. ಬದಲಾಗಿ, ಹಿಂದಿನ ಹಲವಾರು ಚುನಾವಣೆಗಳ ಸಂದರ್ಭದಲ್ಲಿ ಚುನಾವಣಾ ಆಯೋಗದ ಪ್ರಚಾರಗಳಲ್ಲಿ ಭಾಗವಹಿಸುವ ಮೂಲಕ ಸಾರ್ವಜನಿಕ ಜಾಗೃತಿ ಮೂಡಿಸುವತ್ತ ಗಮನಹರಿಸಿದ್ದಾರೆ ಎಂದು ಒತ್ತಿ ಹೇಳಿದ್ದಾರೆ.
ಮುಂಬೈಯಲ್ಲಿ ಎಫ್‌ಐಆರ್ ದಾಖಲು: ''ಅಮೀರ್ ಖಾನ್ ತಮ್ಮ 35 ವರ್ಷಗಳ ವೃತ್ತಿ ಜೀವನದುದ್ದಕ್ಕೂ ಯಾವುದೇ ರಾಜಕೀಯ ಪಕ್ಷವನ್ನು ಎಂದಿಗೂ ಬೆಂಬಲಿಸಿಲ್ಲ ಎಂದು ನಾವು ಸ್ಪಷ್ಟಪಡಿಸಲು ಬಯಸುತ್ತೇವೆ. ಹಿಂದಿನ ಹಲವು ಚುನಾವಣೆಗಳಲ್ಲಿ ಚುನಾವಣಾ ಆಯೋಗದ ಸಾರ್ವಜನಿಕ ಜಾಗೃತಿ ಅಭಿಯಾನಗಳ ಮೂಲಕ ಸಾರ್ವಜನಿಕ ಜಾಗೃತಿ ಮೂಡಿಸಲು ಅವರು ತಮ್ಮ ಪ್ರಯತ್ನಗಳನ್ನು ಸಮರ್ಪಿಸಿದ್ದಾರೆ. ಅಮೀರ್ ಖಾನ್ ಅವರು ನಿರ್ದಿಷ್ಟ ರಾಜಕೀಯ ಪಕ್ಷವನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಇತ್ತೀಚಿನ ವೈರಲ್ ವಿಡಿಯೋ ಆತಂಕಕಾರಿ. ಇದು ನಕಲಿ ವೀಡಿಯೊ ಮತ್ತು ಸಂಪೂರ್ಣವಾಗಿ ಸುಳ್ಳು ಎಂದು ಅಮೀರ್ ಖಾನ್ ಸ್ಪಷ್ಟಪಡಿಸಲು ಬಯಸುತ್ತಾರೆ'' ಎಂದು ವಕ್ತಾರರು ತಿಳಿಸಿದ್ದಾರೆ.
''ಈ ವಿಷಯಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರ ಸೈಬರ್ ಕ್ರೈಂ ಸೆಲ್‌ನಲ್ಲಿ ಎಫ್‌ಐಆರ್ ದಾಖಲಿಸುವುದು ಸೇರಿದಂತೆ ವಿವಿಧ ಅಧಿಕಾರಿಗಳಿಗೆ ವರದಿ ಮಾಡಿದ್ದಾರೆ. ಎಲ್ಲ ಭಾರತೀಯರು ಹೊರಗೆ ಬಂದು ಮತ ಚಲಾಯಿಸಲು ಮತ್ತು ನಮ್ಮ ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯ ಭಾಗಿಯಾಗಲು ಅಮೀರ್ ಖಾನ್ ಒತ್ತಾಯಿಸಲು ಇಚ್ಛಿಸುತ್ತಾರೆ'' ಎಂದು ಹೇಳಿದ್ದಾರೆ.
'ಲಾಲ್ ಸಿಂಗ್ ಚಡ್ಡಾ' ಚಿತ್ರದ ನಂತರ ವಿರಾಮದ ನಂತರ ಅಮೀರ್ ಖಾನ್, 'ಸಿತಾರೆ ಜಮೀನ್ ಪರ್' ಸಿನಿಮಾದ ಚಿತ್ರೀಕರಣವನ್ನು ಪುನರಾರಂಭಿಸಿದ್ದಾರೆ. ಆರ್.ಎಸ್.ಪ್ರಸನ್ನ ನಿರ್ದೇಶನದ ಈ ಚಿತ್ರವು 'ಡೌನ್ ಸಿಂಡ್ರೋಮ್' ಸಮಸ್ಯೆಯ ಕೇಂದ್ರೀಕರಿಸಿದೆ. ಕ್ರಿಸ್‌ಮಸ್‌ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಜೆನಿಲಿಯಾ ಡಿಸೋಜಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ಪತಂಜಲಿ ಕೇಸ್: ಸಾರ್ವಜನಿಕವಾಗಿ ಕ್ಷಮೆ ಯಾಚಿಸುತ್ತೇವೆ-ರಾಮ್‌ದೇವ್; ನೀವು ಅಷ್ಟು ಮುಗ್ಧರಲ್ಲ-ಸುಪ್ರೀಂ ಕೋರ್ಟ್