ಜಮುಯಿ (ಬಿಹಾರ) : ಸರ್ಕಾರಿ ಶಾಲೆಯಲ್ಲಿ ಮಕ್ಕಳು, ಬೆಂಚ್, ಕಪ್ಪುಹಲಗೆ, ಪಾಠ ಹೇಳುವ ಶಿಕ್ಷಕರನ್ನು ನಾವು ಕಾಣುತ್ತೇವೆ. ಆದರೆ, ಇಲ್ಲಿನ ಶಾಲೆಯೊಳಗೆ ನೀವು ಕಾಲಿಟ್ಟರೆ ಮೊದಲು ನೋಡೋದು ಮಲಗಲು ಐಷಾರಾಮಿ ಬೆಡ್, ಟಿವಿ, ಫ್ರಿಡ್ಜ್, ಅಡುಗೆ ಮಾಡುವ ವಸ್ತುಗಳು!
ಅರೆ.. ಇದೇನಪ್ಪಾ ಅಂತೀರಾ. ಹೌದು, ಬಿಹಾರದ ಜಮುಯಿ ಜಿಲ್ಲೆಯ ಗ್ರಾಮವೊಂದರ ಸರ್ಕಾರಿ ಶಾಲೆಯನ್ನು ಅಲ್ಲಿನ ಮುಖ್ಯೋಪಾಧ್ಯಾಯರು ತಮ್ಮ ನಿವಾಸವನ್ನಾಗಿ ಮಾಡಿಕೊಂಡಿದ್ದಾರೆ. ಶಾಲೆಯ ಒಂದು ಕೊಠಡಿಯನ್ನು ತಾವೇ ಒತ್ತುವರಿ ಮಾಡಿಕೊಂಡಿದ್ದಾರೆ. ಅಲ್ಲಿ ಅವರು "ಸಂಸಾರ" ಸಾಗಿಸುತ್ತಿದ್ದಾರೆ.
ಮುಖ್ಯ ಶಿಕ್ಷಕಿ ಶಾಲೆಯಲ್ಲಿನ ಕೊಠಡಿಯನ್ನು ತಾವು ನೆಲೆಸಲು ಬಳಸಿಕೊಂಡಿದ್ದಾರೆ. ಶಾಲೆಯಲ್ಲಿ ಇರುವುದೇ ನಾಲ್ಕು ಚಿಕ್ಕ ಕೊಠಡಿಗಳು ಅದರಲ್ಲಿ ಒಂದನ್ನು ಶಿಕ್ಷಕಿ 'ಶಯನಗೃಹ' ಮಾಡಿಕೊಂಡಿದ್ದರೆ, ಉಳಿದ ಮೂರರಲ್ಲಿ 134 ಮಕ್ಕಳಿಗೆ ಪಾಠ ಬೋಧನೆ ನಡೆಯುತ್ತಿದೆ.
ಬೆಡ್ರೂಮ್ ಆದ ಕ್ಲಾಸ್ರೂಮ್: ಶಾಲಾ ಕೊಠಡಿ ಎನ್ನಿಸಿಕೊಂಡ ಈ ರೂಮ್ನಲ್ಲಿ ಐಷಾರಾಮಿ ಬೆಡ್, ಟಿವಿ, ಬೀರು, ಟೇಬಲ್ಗಳು, ಅಡುಗೆ ವಸ್ತುಗಳು, ಫ್ರಿಡ್ಜ್ ಇವೆ. ಇಲ್ಲಿ ಶಾಲಾ ಶಿಕ್ಷಕಿ ತಮ್ಮ ಪತಿಯ ಜೊತೆಗೆ ವಾಸವಿದ್ದಾರೆ. ಶಾಲೆಗೆ ಸಂಬಂಧವಿರದ ಮುಖ್ಯಶಿಕ್ಷಕಿ ಪತಿ ಬೇರೊಂದು ಕೆಲಸ ಮಾಡುತ್ತಿದ್ದು, ಇಲ್ಲಿರುವ ಕ್ಲಾಸ್ರೂಮ್ ಎಂಬ ಬೆಡ್ರೂಮಿನಲ್ಲಿ ನೆಲೆಸಿದ್ದಾರೆ.
ಈ ಗ್ರಾಮೀಣ ಶಾಲೆಯನ್ನು ಈಚೆಗಷ್ಟೇ ಮೇಲ್ದರ್ಜೆಗೇರಿಸಲಾಗಿದೆ. ಇಲ್ಲಿ 1 ರಿಂದ 8ನೇ ತರಗತಿವರೆಗೆ ಅಧ್ಯಯನ ನಡೆಸಲಾಗುತ್ತಿದೆ. ಇಲ್ಲಿನ ಮಕ್ಕಳ ಸಂಖ್ಯೆ 134. ಶಾಲೆಯಲ್ಲಿನ ಮೂರು ಕೊಠಡಿಗಳಲ್ಲಿ, ಮೊದಲ ರೂಮಿನಲ್ಲಿ ಒಂದರಿಂದ ಮೂರನೇ ತರಗತಿವರೆಗೆ, ಎರಡನೇ ಕೊಠಡಿಯಲ್ಲಿ ನಾಲ್ಕರಿಂದ ಐದನೇ ತರಗತಿವರೆಗೆ ಹಾಗೂ ಮೂರನೇ ಕೊಠಡಿಯಲ್ಲಿ ಆರರಿಂದ 8ನೇ ತರಗತಿವರೆಗೆ ಪಾಠ ಮಾಡಲಾಗುತ್ತಿದೆ.
ಶಿಕ್ಷಕಿ ಹೇಳೋದೇನು?: ಮೊದಲು ಜಮುಯಿ ನಗರದಿಂದ ಶಾಲೆಗೆ ಬಂದು ಹೋಗುತ್ತಿದ್ದೆ. ಈಗ ಶಾಲೆಯ ಪಕ್ಕದಲ್ಲಿಯೇ ಮನೆ ಕಟ್ಟಲಾಗುತ್ತಿದೆ. ಈ ಊರಿನಲ್ಲಿ ಬೇರೆ ಮನೆ ಸಿಗದ ಕಾರಣ ಶಾಲೆಯ ಕೊಠಡಿಯನ್ನು ಬಳಸುತ್ತಿದ್ದೇನೆ. ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ನಿರ್ಮಾಣವಾಗುತ್ತಿರುವ ನನ್ನ ಮನೆಯನ್ನೂ ನೋಡಿಕೊಳ್ಳಬಹುದು. ಸ್ವಂತ ಮನೆ ಸಿದ್ಧವಾದ ತಕ್ಷಣ ಅಲ್ಲಿಗೆ ಸ್ಥಳಾಂತರಗೊಳ್ಳುತ್ತೇನೆ ಎಂದು ಶಿಕ್ಷಕಿ ಹೇಳುತ್ತಾರೆ.
ಶಾಲಾ ಕೊಠಡಿಯನ್ನು ಬೆಡ್ರೂಂ ಆಗಿ ಮಾಡಿದ ವಿಡಿಯೋವನ್ನು ಕೆಲವು ಗ್ರಾಮಸ್ಥರು ಚಿತ್ರೀಕರಿಸಿದ್ದಾರೆ. ಶಾಲೆಗೆ ಡಿಇಒ ಜೊತೆಗೆ ಬಂದು ಪರಿಶೀಲಿಸಿದ್ದೇವೆ. ನಾಲ್ಕು ಕೊಠಡಿಗಳಲ್ಲಿ ಮೂರರಲ್ಲಿ ಪಾಠ ನಡೆಯುತ್ತಿದ್ದರೆ, ಒಂದನ್ನ ಶಿಕ್ಷಕಿ ವೈಯಕ್ತಿಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಇದರಿಂದ ಮಕ್ಕಳು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಶಿಕ್ಷಣಾಧಿಕಾರಿ ರಾಕೇಶ್ ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: ಎಐ ಬಳಸಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ನಕಲಿ ವಿಡಿಯೋ ಬಳಕೆ: ಎಫ್ಐಆರ್ ದಾಖಲು