ಸೋಲನ್(ಹಿಮಾಚಲ ಪ್ರದೇಶ): ಹಿಮಾಚಲದಲ್ಲಿ ಕಂಪನಿಯೊಂದು ಏಕಕಾಲಕ್ಕೆ 80 ಮಂದಿ ಕಾರ್ಮಿಕರಿಗೆ ಗೇಟ್ ಪಾಸ್ ನೀಡಿ ಮನೆಗೆ ಕಳುಹಿಸಿರುವ ಘಟನೆ ಭಾರಿ ಚರ್ಚೆಗೆ ಒಳಗಾಗಿದೆ. ಇದಕ್ಕೆ ಕಾರಣ ಕೇಳಿದರೆ ಕಾರ್ಮಿಕರು ಗಡ್ಡ ಮೀಸೆ ಹೊಂದಿದ್ದಕ್ಕಾಗಿ ಕೆಲಸದಿಂದ ವಜಾ ಮಾಡಲಾಗಿದೆ ಎಂದು ಪ್ರತ್ಯುತ್ತರ ನೀಡಿದೆ. ಮೇ 1 ಅಂತಾರಾಷ್ಟ್ರೀಯ ಕಾರ್ಮಿಕ ದಿನದಂದು ಕಂಪನಿ ಷರತ್ತಿನ ವಿರುದ್ಧ ಕಾರ್ಮಿಕರು ಪ್ರತಿಭಟನೆ ಮುಂದುವರಿಸಿ ಬಿಸಿ ಮುಟ್ಟಿಸಿದ್ದರು.
ಹೌದು, ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯ ಪರ್ವಾನು ಕೈಗಾರಿಕೆ ಪ್ರದೇಶದಲ್ಲಿ ಗಡ್ಡ ಮತ್ತು ಮೀಸೆಯನ್ನು ಹೊಂದಿದ್ದ 80 ಕಾರ್ಮಿಕರನ್ನು ಕಂಪನಿಯಿಂದ ಹೊರಹಾಕಲಾಗಿದೆ. ಕಂಪನಿ ಷರತ್ತನ್ನು ವಿರೋಧಿಸಿ ಕೆಲ ದಿನಗಳ ಹಿಂದೆಯೂ ಕಾರ್ಮಿಕರು ಮುಷ್ಕರ ನಡೆಸಿದ್ದರು.
ಮಾಹಿತಿಯ ಪ್ರಕಾರ, ಹಿಮಾಚಲ ಪ್ರದೇಶದ ಸೋಲನ್‌ನ ಕೈಗಾರಿಕಾ ಪ್ರದೇಶ ಪರ್ವಾನುದಲ್ಲಿನ ಕಂಪನಿಯೊಂದು 80 ಕಾರ್ಮಿಕರನ್ನು ವಜಾ ಮಾಡಿದೆ. ಗಡ್ಡ, ಮೀಸೆ ಟ್ರಿಮ್ ಮಾಡಿದರೂ ಕೂಲಿ ನೀಡುತ್ತಿಲ್ಲ ಎಂದು ಕಾರ್ಮಿಕರು ಆರೋಪಿಸಿದ್ದಾರೆ. ಕೆಲ ದಿನಗಳ ಹಿಂದೆ ಕೂಡ ಈ ಕಾರ್ಮಿಕರಿಗೆ ಉದ್ಯಮ ಪ್ರವೇಶಿಸದಂತೆ ನಿರ್ಬಂಧ ವಿಧಿಸಲಾಗಿದೆ.
ಲಿಖಿತ ದೂರು : ಕಂಪನಿಯ ಷರತ್ತನ್ನು ಖಂಡಿಸಿ ಹೊರಗೆ ಕಾರ್ಮಿಕರು ಪ್ರತಿಭಟನೆ ನಡೆಸಿದಾಗ, ಆಡಳಿತ ಮಂಡಳಿಯು ಕಾರ್ಮಿಕರೊಂದಿಗೆ ಮಾತನಾಡಲು ಒಪ್ಪಿಕೊಂಡಿದೆ. ಕಾರ್ಮಿಕರಿಗೆ ಆಡಳಿತ ಮಂಡಳಿ ಗಡ್ಡ ಮೀಸೆ ಟ್ರಿಮ್ ಮಾಡಿಕೊಂಡು ಬರುವಂತೆ ಹೇಳಿದೆ. ಆದರೆ, ಮೊದಲಿಗೆ ಕಾರ್ಮಿಕರು ಇದನ್ನು ವಿರೋಧಿಸಿದ್ದರು. ಆದರೆ ನಂತರ ಷರತ್ತು ಒಪ್ಪಲಾಯಿತು.
ಹೀಗಿದ್ದರೂ ಕಾರ್ಮಿಕರನ್ನು ನೇಮಿಸಿಕೊಳ್ಳುತ್ತಿಲ್ಲ. ಕಳೆದ ಮಂಗಳವಾರ ಕಾರ್ಮಿಕರು ಪ್ರತಿಭಟನೆ ನಡೆಸಿ ಕಾರ್ಮಿಕ ಆಯುಕ್ತರು, ಡಿಸಿ ಸೋಲನ್ ಮೂಲಕ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರಿಗೆ ಲಿಖಿತ ದೂರನ್ನು ಕಳುಹಿಸಿದ್ದರು. ವಿಷಯದ ಬಗ್ಗೆ ಮಾಹಿತಿ ಪಡೆದ ಪರ್ವಾನೂ ಲೇಬರ್ ಇನ್ಸ್‌ಪೆಕ್ಟರ್ ಲಲಿತ್ ಠಾಕೂರ್ ಅವರು ಕಂಪನಿಗೆ ಭೇಟಿ ನೀಡಿ ಆಡಳಿತ ಮಂಡಳಿ ಮತ್ತು ಕಾರ್ಮಿಕರ ಹೇಳಿಕೆಗಳನ್ನು ಆಲಿಸಿ, ದಾಖಲಿಸಿಕೊಂಡಿದ್ದಾರೆ.
ಡಿಸಿ ತನಿಖೆಗೆ ಆದೇಶ: ಡಿ ಸಿ ಮನಮೋಹನ್ ಶರ್ಮಾ ಕೂಡ ಈ ವಿಷಯದ ಬಗ್ಗೆ ಗಮನ ಹರಿಸಿದ್ದಾರೆ. ಪರ್ವಾನೂರಿನ ಉದ್ಯಮವೊಂದರಲ್ಲಿ ಗಡ್ಡ ಮೀಸೆ ಇದ್ದ ಕಾರಣಕ್ಕೆ 80 ಮಂದಿ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ನಿಟ್ಟಿನಲ್ಲಿ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ತನಿಖೆಗೆ ಆದೇಶಿಸಲಾಗಿದೆ. ಉದ್ಯಮದಲ್ಲಿ ಇಂತಹ ಘಟನೆ ನಡೆದರೆ ಉದ್ಯಮದ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು. ಪ್ರಸ್ತುತ, ಕಂಪನಿಯು ಏಕೆ ಅಂತಹ ಕ್ರಮಕ್ಕೆ ಮುಂದಾಗಿದೆ ಎಂಬ ವಿಷಯದ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದನ್ನೂಓದಿ:ಇ-ಶ್ರಮ ಕಾರ್ಡ್ ಯೋಜನೆ ಎಂದರೇನು? ಪ್ರಯೋಜನಗಳ ಬಗ್ಗೆ ಗೊತ್ತಿದೆಯೇ? ನೋಂದಣಿ ಹೇಗೆ? ಸಂಪೂರ್ಣ ಮಾಹಿತಿ