ನೋಯ್ಡಾ (ಉತ್ತರ ಪ್ರದೇಶ): ಕ್ರಿಕೆಟ್ ಪಂದ್ಯದ ವೇಳೆ ವಾದ - ಪ್ರತಿವಾದದ ಹಿನ್ನೆಲೆಯಲ್ಲಿ ಮೂವರು ವ್ಯಕ್ತಿಗಳು ಕಲ್ಲಿನಿಂದ ತಲೆಗೆ ಹೊಡೆದ ಪರಿಣಾಮ 24 ವರ್ಷದ ಯುವಕ ಮೃತಪಟ್ಟಿರುವ ಘಟನೆ ನೋಯ್ಡಾ ಎಕ್ಸ್‌ಟೆನ್ಶನ್‌ನಲ್ಲಿ ಭಾನುವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುಮಿತ್ (24) ಸಾವನ್ನಪ್ಪಿರುವ ಯುವಕ. ಮೂವರಿಂದ ಯುವಕ ತಪ್ಪಿಸಿಕೊಳ್ಳಲು ಪ್ರಯತ್ನಿಸಲು ಹೋಗಿ ಚರಂಡಿಗೆ ಬಿದ್ದಿದ್ದಾನೆ. ಈ ವೇಳೆ ಆ ಯುವಕನ ಮೇಲೆ ಕಲ್ಲುಗಳಿಂದ ಮತ್ತೆ ದಾಳಿ ನಡೆಸಲಾಗಿದೆ. ಈ ಸಂಬಂಧ ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಮೃತ ಯುವಕನ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದು, ಈ ಕಂಪ್ಲೆಂಟ್ ಸ್ವೀಕರಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಉಪ ಪೊಲೀಸ್ ಆಯುಕ್ತರಿಂದ ಮಾಹಿತಿ: ಉಪ ಪೊಲೀಸ್ ಆಯುಕ್ತ (ಸೆಂಟ್ರಲ್ ನೋಯ್ಡಾ) ಹಿರ್ದೇಶ್ ಕಥೇರಿಯಾ ಅವರು ಈ ಪ್ರಕರಣದ ಕುರಿತು ಮಾತನಾಡಿ, ''ಚಿಪಿಯಾನಾ ಗ್ರಾಮದ ಬಳಿ ಕ್ರಿಕೆಟ್ ಪಂದ್ಯದ ವೇಳೆ ನಡೆದ ಜಗಳದ ಬಗ್ಗೆ ಬಿಸ್ರಖ್ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಮಧ್ಯಾಹ್ನ ಎಚ್ಚರಿಕೆ ನೀಡಲಾಗಿತ್ತು. ಸ್ವೀಕರಿಸಿದ ಮಾಹಿತಿಯ ಪ್ರಕಾರ, ಸುಮಿತ್ ದಾಳಿಕೋರರಿಂದ ತಪ್ಪಿಸಿಕೊಂಡು ಓಡಿಹೋಗಲು ಪ್ರಯತ್ನಿಸಿದ್ದಾರೆ. ಆದರೆ, ಯುವಕ ಚರಂಡಿಗೆ ಬಿದ್ದ ಸಮಯದಲ್ಲಿ ಮೂವರು ಮಾರಣಾಂತಿವಾಗಿ ಹಲ್ಲೆ ನಡೆಸಿದ್ದಾರೆ. ಮೂವರು ಆರೋಪಿಗಳು ಯುವಕನ ತಲೆಗೆ ಕಲ್ಲುಗಳಿಂದ ಹೊಡೆದಿದ್ದಾರೆ. ಇದರಿಂದಾಗಿ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಕಥೇರಿಯಾ ವಿವರಿಸಿದ್ದಾರೆ.
ಮೂವರ ವಿರುದ್ಧ ಎಫ್‌ಐಆರ್ ದಾಖಲು: "ಸುಮಿತ್ ಅವರ ಕುಟುಂಬದಿಂದ ದೂರು ಸ್ವೀಕರಿಸಲಾಗಿದೆ. ಜೊತೆಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. ಪ್ರಮುಖ ಆರೋಪಿ ಹಿಮಾಂಶು ಮತ್ತು ಇತರ ಇಬ್ಬರ ವಿರುದ್ಧ ಬಿಸ್ರಖ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಯುವಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚಿನ ಪ್ರಕರಣ, ಕ್ರಿಕೆಟ್ ಪಂದ್ಯದ ವೇಳೆ ಗಲಾಟೆ, ಇಬ್ಬರು ಯುವಕರ ಹತ್ಯೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ವೇಳೆ ಜಗಳ ಶುರುವಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ ಕಾರಣವಾಗಿತ್ತು. ಇಬ್ಬರು ಯುವಕರಿಗೆ ಚಾಕುವಿನಿಂದ ಇರಿಯಲಾಗಿತ್ತು. ಪರಿಣಾಮ ತೀವ್ರ ಗಾಯಗಳಿಂದ ಇವರಿಬ್ಬರು ಸಾವನ್ನಪ್ಪಿದ್ದರು. ದೊಡ್ಡಬೆಳವಂಗಲದ ಭರತ್ (23) ಮತ್ತು ಪ್ರತೀಕ್ (17) ಮೃತಪಟ್ಟವರು.
ಮೈದಾನದಲ್ಲಿ ವಾಹನ ಪಾರ್ಕಿಂಗ್ ಮಾಡುವ ವಿಚಾರದ ಕುರಿತು ದೊಡ್ಡಬೆಳವಂಗಲ ಹಾಗೂ ಹುಲಿಕುಂಟೆ ಗ್ರಾಮದ ಯುವಕರ ನಡುವೆ ಜಗಳ ನಡೆದಿತ್ತು. ಅಷ್ಟಕ್ಕೆ ಸುಮ್ಮನಾಗದ ಯುವಕರು ಬಸ್ ನಿಲ್ದಾಣ ಬಳಿ ಬಂದು ಹೊಡೆದಾಟಕ್ಕೆ ಇಳಿದಿದ್ದರು. ಈ ವೇಳೆ, ಭರತ್ ಹಾಗೂ ಪ್ರತೀಕ್‌ಗೆ ಎದುರಾಳಿ ಗುಂಪಿನ ಯುವಕರು ಚಾಕುವಿನಿಂದ ಬಲವಾಗಿ ಇರಿದಿದ್ದರು. ಅವರನ್ನು ದೊಡ್ಡಬಳ್ಳಾಪುರದ ಖಾಸಗಿ ಆಸ್ಪತ್ರೆಗೆ ಸಾಗಿಸುವ ವೇಳೆಯಲ್ಲಿ ಯುವಕರು ಮಾರ್ಗ ಮಧ್ಯದಲ್ಲೇ ಸಾವನ್ನಪ್ಪಿದ್ದರು. ಎಸ್ಪಿ ಹಾಗೂ ಡಿವೈಎಸ್ಪಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಈ ಕುರಿತು ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ಅಸ್ಸೋಂ ಪೊಲೀಸ್ ಅಕಾಡೆಮಿಯಲ್ಲಿ ಘರ್ಷಣೆ: 7 ಪ್ರಶಿಕ್ಷಣಾರ್ಥಿಗಳಿಗೆ ಗಾಯ