ಕೊಲ್ಲಾಪುರ(ಮಹಾರಾಷ್ಟ್ರ): ಐಪಿಎಲ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾನಿಯೊಬ್ಬನ ಮೇಲೆ ಮುಂಬೈ ಇಂಡಿಯನ್ಸ್ ತಂಡದ ಅಭಿಮಾನಿಗಳು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಕರ್ವೀರ್ ತಾಲೂಕಿನ ಹನಮಂತವಾಡಿಯಲ್ಲಿ ನಡೆದಿದೆ. ಬುಧವಾರ ರಾತ್ರಿ ಮುಂಬೈ ಇಂಡಿಯನ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ಪಂದ್ಯದಲ್ಲಿ ರೋಹಿತ್ ಶರ್ಮಾ ಔಟಾಗಿದ್ದಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿ ಸಂಭ್ರಮಿಸಿದ್ದರು. ಇದರಿಂದ ಕೋಪಗೊಂಡ ಮುಂಬೈ ಇಂಡಿಯನ್ಸ್ನ ಇಬ್ಬರು ಅಭಿಮಾನಿಗಳು ಸಿಎಸ್‌ಕೆ ಅಭಿಮಾನಿಯೊಬ್ಬರ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿದ್ದರು.
ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ಹನಮಂತವಾಡಿಯ ಸಿಎಸ್‌ಕೆ ಅಭಿಮಾನಿ ಬಂದೋಪಂತ್ ಬಾಪುಸೋ ತಿಬಿಲೆ (63) ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಸಂಜೆ ಮೃತಪಟ್ಟಿದ್ದಾರೆ. ಈ ಪ್ರಕರಣ ಸಂಬಂಧ ಬಲವಂತ ಮಹಾದೇವ ಜಾಂಜಗೆ ಮತ್ತು ಸಾಗರ್ ಸದಾಶಿವ ಜಾಂಜಗೆ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ಹಿನ್ನೆಲೆ ಏನು?: ಬುಧವಾರ ಸಂಜೆ ನಡೆದ ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯವನ್ನು ಮುಂಬೈ ಇಂಡಿಯನ್ಸ್ ಅಭಿಮಾನಿಗಳಾದ ಬಲವಂತ ಮಹಾದೇವ ಜಾಂಜಗೆ ಮತ್ತು ಸಾಗರ್ ಜಾಂಜಗೆ ಶಿವಾಜಿ ಗಾಯಕವಾಡ ಅವರ ಮನೆಯಲ್ಲಿ ವೀಕ್ಷಿಸುತ್ತಿದ್ದರು. ಅಂದು ಹೈದರಾಬಾದ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ರನ್ ಹೊಳೆಯನ್ನೇ ಹರಿಸಿತ್ತು. ಈ ವೇಳೆ ಪಂದ್ಯ ವೀಕ್ಷಿಸಲು ಸಿಎಸ್‌ಕೆ ಅಭಿಮಾನಿ ಬಂದೋಪಂತ್ ತಿಬಿಲೆ ಅಲ್ಲಿಗೆ ಬಂದಿದ್ದರು. ಇದಾದ ಕೆಲವೇ ನಿಮಿಷಗಳಲ್ಲಿ ರೋಹಿತ್ ಶರ್ಮಾ ವಿಕೆಟ್ ಪತನವಾಗಿದೆ. ಈ ವೇಳೆ ಬಂದೋಪಂತ್ ತಿಬಿಲೆ, ರೋಹಿತ್ ಶರ್ಮಾ ಔಟ್ ಆಗಿದ್ದರಿಂದ ಮುಂಬೈ ಇಂಡಿಯನ್ಸ್ಗೆ ಪಂದ್ಯ ಗೆಲ್ಲಲು ಸಾಧ್ಯವಾಗುವುದಿಲ್ಲ ಎಂದು ಹೇಳಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರಶಂಸಿಸಲು ಪ್ರಾರಂಭಿಸಿದ್ದಾರೆ.
ಇದರಿಂದ ಬಲವಂತ ಜಾಂಜಗೆ ಮತ್ತು ಸಾಗರ್ ಜಾಂಜಗೆ ಕೋಪಕೊಂಡು, ದೊಣ್ಣೆಯಿಂದ ಸಿಎಸ್‌ಕೆ ಅಭಿಮಾನಿಯ ತಲೆಗೆ ಹೊಡೆದಿದ್ದರು. ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಪ್ರಜ್ಞಾಹೀನರಾಗಿ ಬಿದ್ದಿದ್ದರು. ನಂತರ ಸ್ಥಳೀಯರು ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ, ಮತ್ತೊಂದು ಆಸ್ಪತ್ರೆಗೆ ದಾಖಲಿಸಿದ್ದರು. ತಲೆಗೆ ತೀವ್ರ ಪೆಟ್ಟಾಗಿದ್ದರಿಂದ ಅವರ ಸ್ಥಿತಿ ಚಿಂತಾಜನಕವಾಗಿತ್ತು. ವೃದ್ಧನಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಅವರು ಶನಿವಾರ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಈ ಘಟನೆಯ ನಂತರ ಮೃತನ ಸಹೋದರ ಸಂಜಯ್ ಬಾಪುಸೋ ತಿಬಿಲೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಇಬ್ಬರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಹೆದ್ದಾರಿಯಲ್ಲಿ ಹಾಡಹಗಲೇ ಒಬ್ಬ ಯುವಕ, ಇಬ್ಬರು ಯುವತಿಯರ ಕಿಡ್ನಾಪ್: ನಾಳೆ ಲಂಡನ್ಗೆ ಹೋಗಬೇಕಿದ್ದ ಯುವಕ - Kidnap Case