ನವದೆಹಲಿ: ಉಗ್ರರ ವಿರುದ್ಧ ಹೋರಾಡಿ ಹುತಾತ್ಮರಾದ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಯೋಧರಾದ ಸನ್ವಾಲಾ ರಾಮ್ ವಿಷ್ಣೋಯ್ ಮತ್ತು ದಿವಂಗತ ಶಿಶು ಪಾಲ್ ಸಿಂಗ್ ಅವರಿಗೆ ಮರಣೋತ್ತರವಾಗಿ 'ರಾಷ್ಟ್ರಪತಿ ಶೌರ್ಯ ಪದಕ' (ಪಿಎಂಜಿ) ಘೋಷಿಸಲಾಗಿದೆ. ಇದರ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 1132 ಪೊಲೀಸರು 'ರಾಷ್ಟ್ರಪತಿ ಪದಕ'ಕ್ಕೆ ಭಾಜನರಾಗಿದ್ದಾರೆ.
ವಿವಿಧ ಕ್ಷೇತ್ರಗಳಲ್ಲಿ ಪೊಲೀಸರು ಸಲ್ಲಿಸಿದ ಸೇವೆ, ಶೌರ್ಯವನ್ನು ಗುರುತಿಸಿ 77ನೇ ಗಣರಾಜ್ಯೋತ್ಸವದ ಮುನ್ನಾದಿನದಂದು ಗೃಹ ಸಚಿವಾಲಯ ಈ ಪ್ರಶಸ್ತಿಗಳನ್ನು ಪ್ರಕಟಿಸಿದೆ. ನಾಳೆ ನಡೆಯುವ ಕಾರ್ಯಕ್ರಮದಲ್ಲಿ ಪದಕಗಳನ್ನು ಪ್ರದಾನ ಮಾಡಲಾಗುತ್ತದೆ.
ಹುತಾತ್ಮ ವಿಷ್ಣೋಯ್ ಮತ್ತು ಶಿಶು ಪಾಲ್ ಸಿಂಗ್ ಅವರು ಕಾಂಗೋದಲ್ಲಿ ನಡೆದ ಮೊರೊಕನ್ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಪ್ರಾಣ ಕಳೆದುಕೊಂಡಿದ್ದರು. ಇವರು ಬಿಎಸ್‌ಎಫ್‌ನ 15ನೇ ಕಾಂಗೋ ತುಕಡಿಯಲ್ಲಿದ್ದರು. ವಿಶ್ವಸಂಸ್ಥೆಯ ಶಾಂತಿಪಾಲನಾ ತಂಡದ ಭಾಗವಾಗಿದ್ದರು. ಇವರ ಅತ್ಯುತ್ತಮ ಕೊಡುಗೆಗಾಗಿ ಪ್ರಶಸ್ತಿ ನೀಡಲಾಗಿದೆ.
ಶೌರ್ಯ ಪ್ರಶಸ್ತಿ: 275 ಶೌರ್ಯ ಪ್ರಶಸ್ತಿಗಳ ಪೈಕಿ ಜಮ್ಮು ಮತ್ತು ಕಾಶ್ಮೀರದ 72 ಪೊಲೀಸರು, ಮಹಾರಾಷ್ಟ್ರದ 18, ಛತ್ತೀಸ್‌ಗಢದ 26, ಜಾರ್ಖಂಡ್‌ನ 23, ಒಡಿಶಾದ 15, ದೆಹಲಿಯ 8, ಸಿಆರ್‌ಪಿಎಫ್‌ನ 65, ಎಸ್‌ಎಸ್‌ಬಿಯ 21 ಸೇರಿ ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಸೇರಿದ ಸಾಧಕರಿಗೆ ಘೋಷಿಸಲಾಗಿದೆ.
ಪೊಲೀಸ್, ಅಗ್ನಿಶಾಮಕ ಸೇವೆ, ಗೃಹರಕ್ಷಕ ದಳ ಮತ್ತು ನಾಗರಿಕ ರಕ್ಷಣೆ ಮಾಡಿದವರಿಗೆ 16 ಶೌರ್ಯ ಮತ್ತು ಸೇವಾ ಪದಕಗಳನ್ನು ಘೋಷಿಸಲಾಗಿದೆ. ಇದರೊಂದಿಗೆ ರಾಷ್ಟ್ರಪತಿಗಳ ಶೌರ್ಯ ಪದಕ, ಶೌರ್ಯ ಪದಕ, ರಾಷ್ಟ್ರಪತಿ ಪದಕ, ಅತ್ಯುತ್ತಮ ಸೇವಾ ಪದಕ, ರಾಷ್ಟ್ರಪತಿಗಳ ಪೊಲೀಸ್ ಪದಕಗಳನ್ನೂ ಇದೇ ವೇಳೆ ನೀಡಲಾಗುತ್ತದೆ. ಘೋಷಿಸಲಾದ 277 ಶೌರ್ಯ ಪ್ರಶಸ್ತಿಗಳಲ್ಲಿ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದ 119 ಸಿಬ್ಬಂದಿ, ಜಮ್ಮು ಮತ್ತು ಕಾಶ್ಮೀರ ಪ್ರದೇಶದ 133, ಇತರ ಪ್ರದೇಶಗಳ 25 ಪೊಲೀಸ್ ಸಿಬ್ಬಂದಿಗೆ ನೀಡಲಾಗುತ್ತದೆ ಎಂದು ಗೃಹ ಸಚಿವಾಲಯ ಹೇಳಿದೆ.
ರಾಷ್ಟ್ರಪತಿ ಸೇವಾ ಪದಕ: 102 ರಾಷ್ಟ್ರಪತಿ ಪದಕಗಳಲ್ಲಿ 94 ಪೊಲೀಸ್ ಸೇವೆಗೆ, 4 ಅಗ್ನಿಶಾಮಕ ಸೇವೆಗೆ, ಇನ್ನು ನಾಲ್ಕು ನಾಗರಿಕ ರಕ್ಷಣೆ ಮತ್ತು ಗೃಹರಕ್ಷಕ ಸೇವಾದಳಕ್ಕೆ ನೀಡಲಾಗಿದೆ. 753 ಅತ್ಯುತ್ತಮ ಸೇವಾ ಪದಕಗಳ ಪೈಕಿ 667 ಪೊಲೀಸ್ ಸೇವೆಗೆ, 32 ಅಗ್ನಿಶಾಮಕ ಸೇವೆಗೆ, 27 ಸಿವಿಲ್ ಡಿಫೆನ್ಸ್ ಮತ್ತು ಹೋಮ್ ಗಾರ್ಡ್ ಸಿಬ್ಬಂದಿಗೆ ಮತ್ತು 27 ಸುಧಾರಣಾ ಸೇವೆಗೆ ನೀಡಲಾಗಿದೆ. 275 ಶೌರ್ಯ ಪದಕಗಳಲ್ಲಿ 6 ಬಿಹಾರ ಪೊಲೀಸರು, ಹರಿಯಾಣದ ಒಬ್ಬ ಪೊಲೀಸ್, ಮಧ್ಯಪ್ರದೇಶದ ಮೂವರು, ಪಂಜಾಬ್‌ನ 8, ತೆಲಂಗಾಣದ 6, ಉತ್ತರ ಪ್ರದೇಶದ 2 ಪೊಲೀಸ್ ಅಧಿಕಾರಿಗಳು ಭಾಜನರಾಗಿದ್ದಾರೆ.
ವಿಶಿಷ್ಟ ಸೇವೆಗಾಗಿ ನೀಡಲಾಗುವ 102 ರಾಷ್ಟ್ರಪತಿಗಳ ಪದಕಗಳಲ್ಲಿ ಅರುಣಾಚಲ ಪ್ರದೇಶ, ಅಸ್ಸೋಂ, ಛತ್ತೀಸ್‌ಗಢ, ಗೋವಾ, ಹಿಮಾಚಲ ಪ್ರದೇಶ, ಜಾರ್ಖಂಡ್, ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್, ತ್ರಿಪುರಾ, ಉತ್ತರಾಖಂಡ, ಅಂಡಮಾನ ಮತ್ತು ನಿಕೋಬಾರ್, ಅಸ್ಸೋಂ ರೈಫಲ್ಸ್, ಎಸ್ಪಿಜಿ, ಬಿಪಿಆರ್ಡಿ , ಎನ್ಐಎ, ಆರ್ಪಿಎ, ಎನ್ಡಿಆರ್ಎಫ್, ಕೇರಳ, ಒಡಿಶಾ ಪೊಲೀಸರಿಗೆ ಸೇವಾ ಪದಕಗಳನ್ನು ನೀಡಲಾಗುತ್ತಿದೆ.
ಇದನ್ನೂ ಓದಿ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಪ್ರಸನ್ನ ವರಾಳೆ ಪ್ರಮಾಣ ವಚನ ಸ್ವೀಕಾರ