ಕೊತ್ವಾಲಿ ನದಿ ಪ್ರವಾಹದಲ್ಲಿ ಸಿಲುಕಿದ ಬಸ್.. 53 ಮಂದಿ ಪ್ರಯಾಣಿಕರ ರಕ್ಷಣೆ - ಉತ್ತರಾಖಂಡ ಮಳೆ ಅವಘಡ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/15-09-2023/640-480-19518197-thumbnail-16x9-new.jpg)
![ETV Bharat Karnataka Team](https://etvbharatimages.akamaized.net/etvbharat/prod-images/authors/karnataka-1716535795.jpeg)
Published : Sep 15, 2023, 12:34 PM IST
ಹರಿದ್ವಾರ (ಉತ್ತರಾಖಂಡ): ಹರಿದ್ವಾರ ಬಿಜ್ನೋರ್ ಜಿಲ್ಲೆಯ ಗಡಿಭಾಗದಲ್ಲಿರುವ ಕೋಟಾ ನದಿಯ ನೀರಿನ ಮಟ್ಟ ದಿಢೀರ್ ಏರಿಕೆಯಾಗಿದೆ. ಇದರಿಂದ ನೇಪಾಳದಿಂದ ಡೆಹ್ರಾಡೂನ್‌ಗೆ ತೆರಳುತ್ತಿದ್ದ ಬಸ್ ಕೊತ್ವಾಲಿ ನದಿಯಲ್ಲಿ ಸಿಲುಕಿಕೊಂಡಿದೆ. "ನದಿಯಲ್ಲಿ ಬಸ್ ಸಿಲುಕಿದ್ದರಿಂದ ಪ್ರಯಾಣಿಕರಲ್ಲಿ ಆತಂಕ ಉಂಟಾಯಿತು. ಮಾಹಿತಿ ತಿಳಿದ ಕೂಡಲೇ ಹರಿದ್ವಾರದ ಶ್ಯಾಮಪುರ ಠಾಣೆ ಪೊಲೀಸರು ಹಾಗೂ ಎನ್‌ಡಿಆರ್‌ಎಫ್ ತಂಡ ಸ್ಥಳಕ್ಕೆ ಧಾವಿಸಿದೆ. ಹಗ್ಗದ ಸಹಾಯದಿಂದ ಬಸ್ನಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಸದ್ಯ ನದಿ ರಭಸವಾಗಿ ಹರಿಯುತ್ತಿರುವ ಕಾರಣ ಬಸ್ ನದಿಯಲ್ಲಿಯೇ ಸಿಲುಕಿಕೊಂಡಿದೆ ಎಂದು ಹರಿದ್ವಾರದ ಶ್ಯಾಮಪುರ ಪೊಲೀಸ್ ಠಾಣೆಯ ಪ್ರಭಾರಿ ಎಸ್ಪಿ ವಿನೋದ್ ಥಪ್ಲಿಯಾಲ್ ಮಾಹಿತಿ ನೀಡಿದರು.
"ಬಸ್ ನದಿಯಲ್ಲಿ ಸಿಕ್ಕಿಬಿದ್ದಿರುವ ಬಗ್ಗೆ ಮಾಹಿತಿ ಬಂದ ತಕ್ಷಣ ಪೊಲೀಸ್ ತಂಡ ತಕ್ಷಣವೇ ಸ್ಥಳಕ್ಕೆ ತಲುಪಿತು. ಬಸ್ನಲ್ಲಿದ್ದ 53 ಮಂದಿ ಪ್ರಯಾಣಿಕರನ್ನು ರಕ್ಷಿಸಲಾಗಿದೆ. ನೀರಿನ ಮಟ್ಟ ತಗ್ಗಿದ ತಕ್ಷಣ ಬಸ್ನ್ನು ನದಿಯಿಂದ ಹೊರ ತೆಗೆಯಲಾಗುವುದು" ಎಂದು ಅವರು ತಿಳಿಸಿದ್ದಾರೆ.
ಜನಜೀವನ ಅಸ್ತವ್ಯಸ್ತ: ಹರಿದ್ವಾರದಲ್ಲಿ ಗುರುವಾರ ತಡರಾತ್ರಿಯಿಂದ ಸುರಿದ ಮಳೆಗೆ ನಗರದ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಹರಿದ್ವಾರದ ಹೃದಯ ಎಂದು ಕರೆಯಲ್ಪಡುವ ರಾಣಿಪುರ ತಿರುವಿನಲ್ಲಿ ನೀರು ನಿಂತಿದ್ದರಿಂದ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ನಿರಂತರ ಮಳೆಯಿಂದ ಹರಿದ್ವಾರದ ಜ್ವಾಲಾಪುರ ಮಾರುಕಟ್ಟೆ ಮತ್ತು ಮೋತಿ ಬಜಾರ್ ಮಾರುಕಟ್ಟೆ ಜಲಾವೃತಗೊಳ್ಳುವ ಪರಿಸ್ಥಿತಿ ಎದುರಾಗಿದೆ.
ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ವರುಣಾರ್ಭಟ: 24 ಗಂಟೆಗಳಲ್ಲಿ 19 ಮಂದಿ ಸಾವು