ಮೆಲ್ಬೋರ್ನ್: ಚೀನಾದ ಶಾಂಡಾಂಗ್ ಮತ್ತು ಹೆನಿನ್ ಪ್ರಾಂತ್ಯಗಳಲ್ಲಿ 35 ಜನರಿಗೆ ಲಾಂಗ್ಯಾ ಹೆನಿಪಾವೈರಸ್ ಎಂಬ ಹೊಸ ವೈರಸ್ ಸೋಂಕು ಕಾಣಿಸಿಕೊಂಡಿದೆ. ಮನುಷ್ಯರಲ್ಲಿ ರೋಗ ತರಿಸುವ ಹೆಂಡ್ರಾ ಮತ್ತು ನಿಪಾ ವೈರಸ್ಗಳಿಗೆ ಇದು ಸಂಬಂಧ ಹೊಂದಿದೆ. ಲೇವಿ (LayV) ಎಂದು ಇದಕ್ಕಿಟ್ಟ ಸಂಕ್ಷಿಪ್ತ ಹೆಸರಿನ ಹೊರತಾಗಿ ತುಂಬಾ ಹೆಚ್ಚಿದೇನೂ ಈ ವೈರಸ್ ಬಗ್ಗೆ ಇನ್ನೂ ತಿಳಿದಿಲ್ಲ. ಇದು ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದಾ ಎಂಬುದು ಸಹ ಗೊತ್ತಾಗಿಲ್ಲ. ಆದರೂ ಹೊಸ ವೈರಸ್ ಬಗ್ಗೆ ನಮಗೆ ತಿಳಿದಿರುವ ಮಾಹಿತಿ ಇಲ್ಲಿದೆ.
ಲಾಂಗ್ಯಾ ರೋಗ ಹೇಗೆ ಹರಡುತ್ತಿದೆ?: ಇತ್ತೀಚಿನ ದಿನಗಳಲ್ಲಿ ಪ್ರಾಣಿಗಳೊಂದಿಗೆ ಒಡನಾಟವಿಟ್ಟುಕೊಂಡಿದ್ದು ಹಾಗೂ ಜ್ವರದಿಂದ ಬಳಲುತ್ತಿದ್ದ ರೋಗಿಗಳ ಸಾಮಾನ್ಯ ಸಮೀಕ್ಷಾ ಕಾರ್ಯದ ಸಂದರ್ಭದಲ್ಲಿ ಚೀನಾದ ಸಂಶೋಧಕರು ಹೊಸ ವೈರಸ್ ಪತ್ತೆ ಮಾಡಿದ್ದಾರೆ. ಮೊಟ್ಟ ಮೊದಲ ಬಾರಿಗೆ ವೈರಸ್ ಪತ್ತೆಯಾದ ನಂತರ ಸಂಶೋಧಕರು ಇತರ ವ್ಯಕ್ತಿಗಳಲ್ಲೂ ಇದರ ಇರುವಿಕೆಯ ಪತ್ತೆಗೆ ಮುಂದಾಗಿದ್ದಾರೆ. ಸಣ್ಣ ಜ್ವರ, ಸುಸ್ತು, ಕೆಮ್ಮು, ಹಸಿವಾಗದಿರುವುದು, ಸ್ನಾಯು ನೋವು, ವಾಕರಿಕೆ ಮತ್ತು ತಲೆನೋವು ಇವು ಹೊಸ ಸೋಂಕು ರೋಗದ ಲಕ್ಷಣಗಳಾಗಿವೆ. ಆದಾಗ್ಯೂ ಈ ರೋಗಿಗಳಿಗೆ ಹೊಸ ವೈರಸ್ ಸೋಂಕು ತಗುಲಿ ಎಷ್ಟು ದಿನಗಳಾಗಿತ್ತು ಎಂಬುದು ತಿಳಿದಿಲ್ಲ.
ಇನ್ನು ಕೆಲವರಲ್ಲಿ ಮಾತ್ರ ನ್ಯುಮೋನಿಯಾ, ಯಕೃತ್ತು ಹಾಗೂ ಕಿಡ್ನಿ ಸಮಸ್ಯೆಗಳು ಕಾಣಿಸಿಕೊಂಡಿವೆ. ಈ ಅನಾರೋಗ್ಯದ ತೀವ್ರತೆ ಎಷ್ಟಿದೆ, ರೋಗಿಯನ್ನು ಆಸ್ಪತ್ರೆಗೆ ದಾಖಲಿಸುವುದು ಅನಿವಾರ್ಯವಾಗಿತ್ತಾ ಅಥವಾ ಸೋಂಕು ಮಾರಣಾಂತಿಕವಾ ಎಂಬುದರ ಬಗ್ಗೆಯೂ ಈವರೆಗೆ ಮಾಹಿತಿಗಳು ಲಭ್ಯವಾಗಿಲ್ಲ.
ಎಲ್ಲಿಂದ ಬಂತು ಹೊಸ ವೈರಸ್?: ಸಾಕು ಪ್ರಾಣಿಗಳು ಅಥವಾ ಕಾಡು ಪ್ರಾಣಿಗಳಿಂದ ವೈರಸ್ ಹರಡುತ್ತಿದೆಯಾ ಎಂಬುದರ ಬಗ್ಗೆ ಸಂಶೋಧನೆ ನಡೆಸಲಾಗುತ್ತಿದೆ. ಅತಿ ಸಣ್ಣ ಸಂಖ್ಯೆಯ ಕುರಿ ಮತ್ತು ನಾಯಿಗಳಿಗೆ ಈ ಸೋಂಕು ಇರುವುದನ್ನು ತಜ್ಞರು ಪತ್ತೆ ಮಾಡಿದ್ದಾರೆ. ಆದರೆ, ಬಹಳಷ್ಟು ಕಾಡು ಇಲಿಗಳಲ್ಲಿ ಈ ವೈರಸ್ ಇರುವುದು ಗೊತ್ತಾಗಿದೆ. ಹೀಗಾಗಿ ಈ ಕಾಡು ಇಲಿಗಳಿಂದಲೇ ಮನುಷ್ಯರಿಗೆ ವೈರಸ್ ಹರಡಿದೆ ಎಂದು ನಂಬಲಾಗಿದೆ.
ಈ ವೈರಸ್ನಿಂದ ರೋಗ ಬರುತ್ತದಾ?: ಹೊಸ ವೈರಸ್ನ ಇರುವಿಕೆಯನ್ನು ಪತ್ತೆ ಮಾಡಲು ಸಂಶೋಧಕರು ಮೆಟಾಜೆನೊಮಿಕ್ ವಿಶ್ಲೇಷಣೆ (metagenomic analysis) ಎಂಬ ಹೊಸ ತಂತ್ರಜ್ಞಾನವೊಂದನ್ನು ಬಳಸಿದ್ದಾರೆ. ಸಂಶೋಧಕರು ಎಲ್ಲ ವಂಶವಾಹಿ ಮಾಹಿತಿಗಳನ್ನು ಅನುಕ್ರಮಗೊಳಿಸಿ, ನಂತರ ಈ ಮೊದಲೇ ತಿಳಿದ ಮಾಹಿತಿಯನ್ನು ಬೇರ್ಪಡಿಸಿ, ಈವರೆಗೆ ತಿಳಿಯದ ವಂಶವಾಹಿಯ ಬಗೆಗಿನ ಮಾಹಿತಿಯನ್ನು ಅಧ್ಯಯನ ಮಾಡಿ ಅದು ಹೊಸ ವೈರಸ್ ಅನ್ನು ಪ್ರತಿನಿಧಿಸಬಹುದು ಎಂದಿದ್ದಾರೆ. ಆದರೆ, ನಿರ್ದಿಷ್ಟವಾಗಿ ಇದೇ ವೈರಸ್ ರೋಗ ಹರಡಲು ಹೇಗೆ ಕಾರಣವಾಗುತ್ತಿದೆ ಎಂಬ ನಿಷ್ಕರ್ಷೆಗೆ ವಿಜ್ಞಾನಿಗಳು ಹೇಗೆ ಬಂದರು ಎಂಬುದು ಪ್ರಶ್ನೆಯಾಗಿದೆ.
ಮುಂದಿನ ದಾರಿ ಏನು?: ಹೊಸ ವೈರಸ್ ಬಗ್ಗೆ ನಮಗೆ ಈಗ ತುಂಬಾ ಕಡಿಮೆ ತಿಳಿದಿದೆ ಮತ್ತು ಸದ್ಯ ತಿಳಿದಿರುವ ಸೋಂಕಿನ ಸಂಖ್ಯೆಯು ವಾಸ್ತವ ಸೋಂಕಿನ ಸಂಖ್ಯೆಗಿಂತ ಎಷ್ಟೋ ಪಟ್ಟು ಹೆಚ್ಚಾಗಿರಬಹುದು. ಆದರೆ, ಸದ್ಯದ ಮಾಹಿತಿಯ ಪ್ರಕಾರ ಈ ವೈರಸ್ ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ ಎಂಬುದಕ್ಕೆ ಸಾಕ್ಷಿ ಇಲ್ಲ. ಸೋಂಕಿನ ತೀವ್ರತೆ ಎಷ್ಟಿರುತ್ತದೆ, ಸೋಂಕು ಹೇಗೆ ಹರಡುತ್ತದೆ ಮತ್ತು ಚೀನಾದಲ್ಲಿ ಇದು ಎಷ್ಟು ವ್ಯಾಪಕವಾಗಿದೆ ಎಂಬುದನ್ನು ತಿಳಿಯಲು ಇನ್ನೂ ಸಾಕಷ್ಟು ಅಧ್ಯಯನಗಳು ನಡೆಯಬೇಕಿವೆ.
ಇದನ್ನು ಓದಿ:ಊರಿಯೂತದ ಸಮಸ್ಯೆಗೆ ರಾಮಬಾಣ ಈ ಪೋಷಕಾಂಶ.. ಯಾವುದಾ ವಿಟಮಿನ್?