ನವದೆಹಲಿ: ಕೋವಿಡ್ ಸಾಂಕ್ರಾಮಿಕತೆಯ ಬಳಿಕ ಹೃದಯಾಘಾತ ಪ್ರಕರಣಗಳ ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಶಾಲಾ ಮಕ್ಕಳಿಂದ ಆರೋಗ್ಯವಂತರವರೆಗೆ ಈ ಸಮಸ್ಯೆ ಕಾಡುತ್ತಿದೆ. ಇದು ಹೃದಯ ವೈಫಲ್ಯದ ಹೊಸ ಸಾಂಕ್ರಾಮಿಕತೆ ಆರಂಭವೇ ಎಂಬ ಅನುಮಾನ ಮೂಡಿಸುತ್ತಿದೆ.
ಇತ್ತೀಚೆಗೆ ಬಿಡುಗಡೆಯಾದ ಎನ್ಸಿಆರ್ಬಿ ವರದಿ ಪ್ರಕಾರ, 2021ಕ್ಕೆ ಹೋಲಿಕೆ ಮಾಡಿದಾದ 2022ರಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದವರ ಸಂಖ್ಯೆ ಶೇ 12.5ರಷ್ಟು ಜಾಸ್ತಿಯಾಗಿದೆ. 2021ರಲ್ಲಿ 28,413 ಮಂದಿ, 2022ರಲ್ಲಿ 32,457 ಮಂದಿ ಸಾವನ್ನಪ್ಪಿದ್ದಾರೆ.
ಈ ಹಿನ್ನೆಲೆಯಲ್ಲಿ ಕಳಪೆ ಹೃದಯ ಕಾರ್ಯಾಚರಣೆಯಲ್ಲಿ ವೈರಸ್ ಸಂಬಂಧ ಮತ್ತು ಕೋವಿಡ್ ಬಳಿಕದ ಹೃದಯದ ಆರೋಗ್ಯ ಕುರಿತು ಅನೇಕ ಸಂಶೋಧನೆಗಳು ನಡೆದಿವೆ. ಇತ್ತೀಚೆಗೆ ಜಪಾನಿನ ಹೊಸ ಅಧ್ಯಯನವೂ ಹೃದಯ ವೈಫಲ್ಯದ ಸಾಂಕ್ರಾಮಿಕತೆ ಅಪಾಯವನ್ನು ಅಂದಾಜಿಸಿದೆ.
ಸೋಂಕಿನ ಬಳಿಕದ ಜೀವನ ಶೈಲಿ: ಕೋವಿಡ್ ಸೋಂಕು ಹೃದಯಾಘಾತದ ಅಪಾಯ ಹೆಚ್ಚಿಸಿದೆ. ಸೋಂಕಿನ ಚೇತರಿಕೆ ಬಳಿಕವೂ ಅದು ಹೃದಯದಲ್ಲಿದ್ದು, ಇದು ಹೃದಯ ಸಮಸ್ಯೆಗೆ ಕಾರಣವಾಗುತ್ತದೆ ಎಂದು ರಿಕೆನ್ ಸಂಶೋಧಕರ ತಂಡ ತಿಳಿಸಿದೆ.
ಇದರ ಹೊರತಾಗಿ ಅನೇಕ ಅಂಶಗಳು ಕೂಡ ಹೃದಯಾಘಾತದ ಅಪಾಯ ಹೆಚ್ಚಳಕ್ಕೆ ಕಾರಣವಾಗಿವೆ. ಹೆಚ್ಚಿ ಸೋಡಿಯಂ ಡಯಟ್, ವ್ಯಾಯಾಮದ ಕೊರತೆ, ಧೂಮಪಾನ, ಅತಿ ಹೆಚ್ಚಿನ ಕುಡಿತ, ಜಢ ಜೀವನಶೈಲಿ ಮುಂತಾದವುಗಳು ಇದಕ್ಕೆ ಕಾರಣವಾಗಿವೆ.
ಹಿಮೋಗ್ಲೋಬಿನ್ ಮಟ್ಟದ ಬಗ್ಗೆ ಇರಲಿ ಕಾಳಜಿ: ಹೆಚ್ಚಿನ ಹಿಮೋಗ್ಲೋಬಿನ್ ಮಟ್ಟ ಕೂಡ ಹೃದಯಾಘಾತ, ಪಾರ್ಶ್ವವಾಯು, ರಕ್ತದ ಹೆಪ್ಪುಗಟ್ಟುವಿಕೆ ಅಪಾಯ ಹೆಚ್ಚಿಸುತ್ತದೆ. ಪೊಲಿಸೆಥೆಮಿಯಾ ಎಂಬುದು ಮಾನವನ ದೇಹದಲ್ಲಿ ಕೆಂಪು ರಕ್ತ ಕೋಶ ಹೆಚ್ಚಿಸುವ ಪರಿಸ್ಥಿತಿಯಾಗಿದೆ. ಇದರಿಂದ ಬೋನ್ ಮಾರೋ ಅಸ್ವಸ್ಥತೆ ಕಾಡುತ್ತಿದೆ. ಈ ಕೋಶಗಳು ರಕ್ತದಲ್ಲಿ ಹೆಚ್ಚಾದರೆ, ಹರಿವಿನ ಪ್ರಮಾಣವನ್ನು ಕಡಿಮೆ ಮಾಡಿ ರಕ್ತ ಹೆಪ್ಪುಗಟ್ಟುವಂತೆ ಮಾಡುತ್ತದೆ.
ಹೆಚ್ಚಿನ ಹಿಮೋಗ್ಲೋಬಿನ್ ಮಟ್ಟವನ್ನು ಕೂಡ ಎಂದಿಗೂ ನಿರ್ಲಕ್ಷ್ಯ ಮಾಡಬಾರದು. ಇದು ಕೂಡ ರಕ್ತ ಹೆಪ್ಪುಗಟ್ಟುವಿಕೆಗೆ ಕಾರಣವಾಗುತ್ತದೆ. ಪಾರ್ಶ್ವವಾಯು, ಹೃದಯಾಘಾತ ಮತ್ತು ಕಾಲು ಮತ್ತು ಹೊಟ್ಟೆಯಲ್ಲಿ ರಕ್ತ ಹೆಪ್ಪುಗಟ್ಟುವಿಕೆಗೆ ಕಾರಣವಾಗುತ್ತದೆ ಎಂದು ಗುರುಗ್ರಾಮದ ಫೋರ್ಟಿಸ್ ಮೆಮೋರಿಯನ್ ರಿಸರ್ಚ್ ಇನ್ಸುಟಿಟ್ಯೂಟ್ನ ಡಾ.ರಾಹುಲ್ ಭಾರ್ಗವ ತಿಳಿಸಿದ್ದಾರೆ
ವ್ಯಾಯಾಮಕ್ಕೆ ಬೇಕು ಸೂಕ್ತ ಮಾರ್ಗದರ್ಶನ: ಜನರು ಅಧಿಕ ವ್ಯಯಾಮ ಮಾಡದಂತೆ, ಒತ್ತಡಕ್ಕೆ ಗುರಿಯಾಗದಂತೆ ಎಚ್ಚರವಹಿಸಬೇಕು. ಕೋವಿಡ್ ಬಳಿಕ ಅಧಿಕ ದೈಹಿಕ ಒತ್ತಡಗಳು ಸೇರಿದಂತೆ ಒಟ್ಟಾರೆ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಫರೀದಾಬಾದ್ನ ಫೋರ್ಟಿಸ್ ಎಸ್ಕೊರ್ಟ್ಸ್ ಹಾಸ್ಪಿಟಲ್ ನಿರ್ದೇಶಕ ಡಾ.ಸಂಜಯ್ ಕುಮಾರ್
ಇದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಬಹುದು. ದೈಹಿಕ ಒತ್ತಡವೂ ಉಸಿರಾಟದ ಸವಾಲು, ಹೃದಯರಕ್ತನಾಳ ಸಮಸ್ಯೆ, ಆಯಾಸ, ಸ್ನಾಯು ಮತ್ತು ಕೀಲು ನೋವುಮ ನರಸಮಸ್ಯೆಯ ಲಕ್ಷಣ, ಜಠರ ಕರುಳಿನ ಸಮಸ್ಯೆಗೆ ಕಾರಣವಾಗಬಹುದು.
ಇಂದು ಫಿಟ್ನೆಸ್ ಟ್ರೆಂಡ್ ಹೆಚ್ಚಿದ್ದು, ಇದಕ್ಕೆ ಸರಿಯಾದ ಪರಿಸರ ವ್ಯವಸ್ಥೆ ಬೇಕು. ಸೂಕ್ತ ತರಬೇತಿ ಪಡೆದವರ ಮಾರ್ಗದರ್ಶನಗಳು ಸಿಕ್ಕಾಗ ಮಾತ್ರ ವ್ಯಾಯಾಮದ ಗುರಿಗಳು ಸಾಧ್ಯವಾಗುತ್ತದೆ ಎನ್ನುತ್ತಾರೆ ತಜ್ಞರು. (ಐಎಎನ್ಎಸ್)
ಇದನ್ನೂ ಓದಿ: ಕೋವಿಡ್ ಬಳಿಕ ಹೃದಯಾಘಾತ ಪ್ರಕರಣ ಹೆಚ್ಚಳ; ಜಪಾನ್ ಅಧ್ಯಯನ