ಲಂಡನ್: ಮಂಕಿಪಾಕ್ಸ್ ಬಗ್ಗೆ ಇತ್ತೀಚಿನ ಹೊಸ ಮಾಹಿತಿ ಅಲಭ್ಯತೆ ಮತ್ತು ಗುಣಮಟ್ಟದ ಕೊರತೆಯಿಂದಾಗಿ ವಿಶ್ವದಾದ್ಯಂತ ಸೋಂಕಿನ ಪರಿಣಾಮಕಾರಿ ಮತ್ತು ಸುರಕ್ಷಿತ ಚಿಕಿತ್ಸೆಗೆ ಅಡ್ಡಿಯಾಗುತ್ತಿದೆ ಎಂದು ಅಂತಾರಾಷ್ಟ್ರೀಯ ಸಂಶೋಧಕರ ತಂಡದ ನೇತೃತ್ವದ ವಿಮರ್ಶೆಯಲ್ಲಿ ತಿಳಿಸಲಾಗಿದೆ.
ಅಸ್ತಿತ್ವದಲ್ಲಿರುವ ಮಾರ್ಗದರ್ಶಕ ಪಟ್ಟಿಯು ಸಾಕಷ್ಟು ವಿವರಗಳನ್ನು ಹೊಂದಿಲ್ಲ, ಇದು ವಿಭಿನ್ನ ಗುಂಪುಗಳನ್ನು ಸೇರಿಸಲು ವಿಫಲವಾಗಿದೆ ಮತ್ತು ವಿರೋಧಾಭಾಸಗಳಿಂದ ಕೂಡಿದೆ ಎಂದು ಯುನೈಟೆಡ್ ಕಿಂಗಡಮ್ನ ಆಕ್ಸ್‌ಫರ್ಡ್, ಆಸ್ಟ್ರೇಲಿಯಾದ ಬ್ರಿಸ್ಟಲ್ ಮತ್ತು ಲಿವರ್‌ಪೂಲ್ ಸ್ಕೂಲ್ ಆಫ್ ಟ್ರಾಪಿಕಲ್ ಮೆಡಿಸಿನ್ ವಿಶ್ವವಿದ್ಯಾಲಯಗಳ ಸಂಶೋಧಕರು ಹೇಳಿದ್ದಾರೆ. ಮಾರ್ಗಸೂಚಿಗಳ ನಡುವಿನ ಸ್ಪಷ್ಟತೆಯ ಕೊರತೆಯು ಮಂಕಿಪಾಕ್ಸ್ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರಿಗೆ ಅನಿಶ್ಚಿತತೆಯನ್ನು ಉಂಟುಮಾಡುತ್ತದೆ ಇದು ರೋಗಿಗಳ ಆರೈಕೆಯ ಮೇಲೆ ಪರಿಣಾಮ ಬೀರಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.
ಹೊಸ ಪುರಾವೆಗಳು ಹೊರಹೊಮ್ಮುತ್ತಿರುವಂತೆ ಯಾವುದೇ ನಿರ್ದಿಷ್ಟ ಸಮಯದಲ್ಲಿ ಮಾರ್ಗಸೂಚಿಗಳನ್ನು ತ್ವರಿತವಾಗಿ ಪರಿಶೀಲಿಸಲು ಮತ್ತು ನವೀಕರಿಸಲು ಮಾನ್ಯತೆ ಪಡೆದ ವೇದಿಕೆ ಬೇಕಿದೆ. ಮಾನವರಲ್ಲಿನ ಮಂಕಿಪಾಕ್ಸ್ ಸೋಂಕು ಉತ್ತಮ ಸಂಪನ್ಮೂಲ ಆರೋಗ್ಯ ವ್ಯವಸ್ಥೆಗಳೊಂದಿಗೆ ಉನ್ನತ ಸಂಪನ್ಮೂಲಗಳನ್ನು ಹೊಂದಿರುವ ಆಸ್ಪತ್ರೆಗಳಿಗೂ ಸವಾಲಾಗಿ ಪರಿಣಮಿಸುತ್ತಿದೆ. ಮಾರ್ಗಸೂಚಿಗಳ ಕೊರತೆಯು ಮಂಕಿಪಾಕ್ಸ್ ರೋಗಿಗಳನ್ನು ನಿರ್ವಹಿಸುವಲ್ಲಿ ಸೀಮಿತ ಹಿಂದಿನ ಅನುಭವ ಹೊಂದಿರುವ ಕ್ಲಿನಿಕ್‌ಗಳ ಮೇಲೆ ವಿಶೇಷವಾಗಿ ಪರಿಣಾಮ ಬೀರಬಹುದು ಎಂದು ಸಂಶೋಧಕರು ಬಿಎಂಜೆ ಗ್ಲೋಬಲ್ ಹೆಲ್ತ್ ಜರ್ನಲ್ನಲ್ಲಿ ಪ್ರಕಟವಾದ ವರದಿಯಲ್ಲಿ ಬರೆದಿದ್ದಾರೆ.
ತಂಡವು ಅಕ್ಟೋಬರ್ 2021 ರ ಮಧ್ಯದವರೆಗೆ ಪ್ರಕಟವಾದ ಸಂಬಂಧಿತ ವಿಷಯಕ್ಕಾಗಿ ಆರು ಪ್ರಮುಖ ಸಂಶೋಧನಾ ಡೇಟಾಬೇಸ್‌ಗಳನ್ನು ಅಧ್ಯಯನ ಮಾಡಿದೆ ಮತ್ತು ಇದರೊಂದಿಗೆ ಗ್ರೇ ಲಿಟರೇಚರ್ ಎಂದು ಕರೆಯಲಾಗುವ, ಉದಾಹರಣೆಗೆ ಮೇ 2022ರವರೆಗೆ ಹಲವಾರು ಭಾಷೆಗಳಲ್ಲಿ ಪ್ರಕಟವಾದ ನೀತಿ ನಿಯಮ ದಾಖಲೆಗಳು, ಸುದ್ದಿಪತ್ರಗಳು, ವರದಿಗಳನ್ನು ಅಧ್ಯಯನ ಮಾಡಿದೆ. ಈ ಮೂಲಕ ಅವರು 14 ಸಂಬಂಧಿತ ಮಾರ್ಗಸೂಚಿಗಳನ್ನು ಕಂಡುಕೊಂಡಿದ್ದಾರೆ. ಸಂಶೋಧನೆ ಮತ್ತು ಮೌಲ್ಯಮಾಪನ II (AGREE) ವ್ಯವಸ್ಥೆಯ ಮೌಲ್ಯಮಾಪನದ ಮಾರ್ಗಸೂಚಿಗಳ ಪ್ರಕಾರ ಹೆಚ್ಚಿನವು ಕಡಿಮೆ ಗುಣಮಟ್ಟವನ್ನು ಹೊಂದಿದ್ದು, ಸಂಭವನೀಯ ಏಳರಲ್ಲಿ ಸರಾಸರಿ ಎರಡು ಅಂಕಗಳನ್ನು ಗಳಿಸಿವೆ. ಹೆಚ್ಚಿನವು ವಿವರಗಳನ್ನು ಹೊಂದಿಲ್ಲ ಮತ್ತು ಕಿರಿದಾದ ವ್ಯಾಪ್ತಿಯ ವಿಷಯಗಳನ್ನು ಮಾತ್ರ ಒಳಗೊಂಡಿವೆ.
ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ ಇತ್ತೀಚಿನ ಮಾರ್ಗದರ್ಶನವು ಸಿಡೋಫೊವಿರ್ ಬದಲಿಗೆ ಟೆಕೊವಿರಿಮಾಟ್ ಬಳಕೆಯನ್ನು ಶಿಫಾರಸು ಮಾಡಿದೆ. ಪ್ರಯೋಗಾಲಯದ ಅಧ್ಯಯನಗಳಲ್ಲಿ ಸಿಡೋಫೊವಿರ್ ಮತ್ತು ಬ್ರಿನ್ಸಿಡೋಫೊವಿರ್ ಪಾಕ್ಸ್ ವೈರಸ್‌ಗಳ ವಿರುದ್ಧ ಸಕ್ರಿಯವಾಗಿದ್ದರೂ, ಅವು ಜನರಲ್ಲಿ ಪಾಕ್ಸ್ ವೈರಸ್‌ಗಳನ್ನು ಎಷ್ಟು ಚೆನ್ನಾಗಿ ಗುಣಪಡಿಸುತ್ತವೆ ಎಂಬುದರ ಕುರಿತು ಕಡಿಮೆ ಮಾಹಿತಿಯಿದೆ. ಇವುಗಳನ್ನು ಕೆಲವು ದೇಶಗಳಲ್ಲಿ ಬಳಸಲು ಮಾತ್ರ ಅನುಮತಿಸಲಾಗಿದೆ.
ಒಟ್ಟಾರೆಯಾಗಿ ನೋಡಿದರೆ ಮಂಕಿಪಾಕ್ಸ್ ಬಗ್ಗೆ ಹೊಸ ಮಾಹಿತಿ ಅಲಭ್ಯತೆ ಮತ್ತು ಗುಣಮಟ್ಟದ ಕೊರತೆಯಿಂದಾಗಿ ವಿಶ್ವದಾದ್ಯಂತ ಸೋಂಕಿನ ಪರಿಣಾಮಕಾರಿ ಮತ್ತು ಸುರಕ್ಷಿತ ಚಿಕಿತ್ಸೆಗೆ ಅಡ್ಡಿಯಾಗುತ್ತಿದೆ ಎಂದು ಅಧ್ಯಯನಗಳು ಹೇಳುತ್ತಿವೆ.