ವಾಷಿಂಗ್ಟನ್: ಕಳೆದ ಮೂರು ವರ್ಷಗಳ ಹಿಂದೆ ಜಗತ್ತಿನಲ್ಲಿಯೇ ತಲ್ಲಣ ಮೂಡಿಸಿದ್ದ ಕೋವಿಡ್-19 ಸೋಂಕು ಚೀನಾದ ಪ್ರಯೋಗಾಲಯದಿಂದ ಸೋರಿಕೆಯಾಗಿದೆ ಎಂದು ಅಮೆರಿಕದ ಶಕ್ತಿ ಇಲಾಖೆ (ಎನರ್ಜಿ ಡಿಪಾರ್ಟ್ಮೆಂಟ್) ವರದಿಯಲ್ಲಿ ತಿಳಿಸಿದೆ. ಎ ಶ್ರೇಣಿಯ ಈ ಗುಪ್ತಚರ ಮಾಹಿತಿಯನ್ನು ಇತ್ತೀಚೆಗೆ ಶ್ವೇತ ಭವನ ಮತ್ತು ಕಾಂಗ್ರೆಸ್ನ ಪ್ರಮುಖ ಸದಸ್ಯರಿಗೆ ನೀಡಲಾಗಿತ್ತು ಎಂದು ವಾಲ್ ಸ್ಟ್ರೀಟ್ ಜನರ್ಲ್ ವರದಿ ಮಾಡಿದೆ. ಕೋವಿಡ್ ಸೋಂಕಿನ ಕುರಿತು ಮೂಲ ತಿಳಿಯುವ ಸಂಬಂಧ ಹೇಗೆ ವಿಭಿನ್ನ ಗುಪ್ತಚರ ಸಂಸ್ಥೆಗಳು ವರದಿ ಮಾಡಿದೆ ಎಂಬುದರ ಕುರಿತು ಕೂಡ ವರದಿಯಲ್ಲಿ ತಿಳಿಸಲಾಗಿದೆ.
ಶಕ್ತಿ ಇಲಾಖೆ ನಡೆಸಿದ ಈ ನಿರ್ಣಯ ಕಡಿಮೆ ವಿಶ್ವಾಸಾರ್ಹತೆಯಿಂದ ಕೂಡಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ತಿಳಿಸಿದೆ. ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಷನ್ (ಎಫ್ಬಿಐ) ಸೇರಿದಂತೆ ಅನೇಕ ಏಜೆನ್ಸಿಗಳು ಈ ವೈರಸ್ ಪ್ರಯೋಗಾಲಯದಿಂದ ಸೋರಿಕೆಯಾಗಿದೆ ಎಂದು ವಾದಿಸಿದ್ದವು. 2021ರಲ್ಲಿ ಸುಧಾರಿತ ವಿಶ್ವಾಸಾರ್ಹತೆ ಜೊತೆಗೆ ಸಾಂಕ್ರಾಮಿಕವೂ ಪ್ರಯೋಗಾಲಯದಿಂದ ಸೊರಿಕೆಯಾಗಿದೆ ಎಂಬ ನಿರ್ಣಯಕ್ಕೆ ಬಂದಿದ್ದವು ಎಂಬುದನ್ನು ತಿಳಿಸಿತ್ತು.
ರಾಷ್ಟ್ರೀಯ ಗುಪ್ತಚರ ಸಮಿತಿ ಸೇರಿದಂತೆ ನಾಲ್ಕು ಇತರೆ ಏಜೆನ್ಸಿಗಳು ನಡೆಸಿದ ತನಿಖೆಯಲ್ಲಿ, ಸೋಂಕು ನೈಸರ್ಗಿಕ ರೂಪಾಂತರ ಎಂಬ ಫಲಿತಾಂಶವನ್ನು ನಿರ್ಣಯಿಸುತ್ತದೆ ಎಂಬುದನ್ನು ತಿಳಿಸಿತ್ತು. ಎರಡು ಏಜೆನ್ಸಿ ಈ ಸಂಬಂಧ ಯಾವುದನ್ನು ನಿರ್ಧರಿಸಿಲ್ಲ ಎಂದು ಮಾಧ್ಯಮ ವರದಿ ತಿಳಿಸಿದೆ. ಶಕ್ತಿ ಇಲಾಖೆ ಅಧ್ಯಕ್ಷರು ನಿರ್ದೇಶಿಸಿದಂತೆ ಕೋವಿಡ್ -19 ರ ಮೂಲವನ್ನು ತನಿಖೆ ಮಾಡುವಲ್ಲಿ ನಮ್ಮ ಗುಪ್ತಚರ ವೃತ್ತಿಪರರ ಸಂಪೂರ್ಣ, ಎಚ್ಚರಿಕೆಯ ಮತ್ತು ವಸ್ತುನಿಷ್ಠ ಕೆಲಸವನ್ನು ಬೆಂಬಲಿಸುವುದನ್ನು ಮುಂದುವರೆಸಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ಈ ಕುರಿತು ಸಂಪೂರ್ಣ ಚರ್ಚೆಯನ್ನು ಮಾಡಲು ಏಜೆನ್ಸಿ ನಿರಾಕರಿಸಿದೆ. ತಮ್ಮ ಪೂರ್ವಾಗ್ರಹಗಳನ್ನು ಬದಿಗಿಟ್ಟು, ಕೋವಿಡ್ ಮೂಲದ ಬಗ್ಗೆ ನಮಗೆ ತಿಳಿದಿರುವ ಮತ್ತು ತಿಳಿದಿಲ್ಲದಿರುವ ವಿಚಾರಗಳನ್ನು ವಸ್ತುನಿಷ್ಠವಾಗಿ ಮರುಪರಿಶೀಲಿಸಲು ಸಿದ್ಧರಿರುವವರಿಗೆ ಅಭಿನಂದನೆಗಳು ಎಂದು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಮೈಕ್ರೋಬಯಾಲಜಿಸ್ಟ್ ಡೇವಿಡ್ ರೆಲ್ಮನ್ ತಿಳಿಸಿದ್ದು, ನಾವು ಅಪೂರ್ಣ ಉತ್ತರವನ್ನು ಸ್ವೀಕರಿಸುವುದಿಲ್ಲ ಅಥವಾ ರಾಜಕೀಯ ಲಾಭದಾಯಕತೆಯ ಕಾರಣ ಬಿಟ್ಟುಕೊಡುವುದಿಲ್ಲ ಎಂದಿದ್ದಾರೆ.
ಶಕ್ತಿ ಇಲಾಖೆಯ ಈ ನಿರ್ಣಯಕ್ಕೆ ಬರಲು ಕಾರಣ ರಾಷ್ಟ್ರೀಯ ಪ್ರಯೋಗಾಲಯಗಳೊಂದಿಗಿನ ಸಂಪರ್ಕ. ಪ್ರಯೋಗಾಲಯದಲ್ಲಿ ಕೆಲವು ಸಂಪ್ರಾದಾಯಿಕ ವಿಧಾನದ ಹೊರತಾಗಿ ಜೈವಿಕ ಸಂಶೋಧನೆ ನಡೆಸಲಾಗಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ. ಇನ್ನು ಎಫ್ಬಿಐ ಮತ್ತು ಶಕ್ತಿ ಇಲಾಖೆ ನಡೆಸಿರುವ ಈ ಎರಡು ಸಂಶೋಧನೆಗಳು ಸೋಂಕು ಪ್ರಯೋಗಾಲಯದಿಂದ ಸೋರಿಕೆ ಆಗಿದೆ ಎಂಬ ನಿರ್ಣಯಕ್ಕೆ ಬಂದರೂ, ಇದರ ಹಿಂದಿನ ಕಾರಣಗಳು ಬೇರೆಯಾಗಿವೆ. ಈ ಹೊಸ ವರದಿಯಲ್ಲಿ ಗುಪ್ತಚರ ಇಲಾಖೆ ಅಧಿಕಾರಿಗಳು, ಇಂದಿಗೂ ಇದರ ಮೂಲಗಳ ಹುಡುಕಾಟ ನಡೆಸಿದ್ದಾರೆ. ಅಮೆರಿಕದಲ್ಲಿ ಕಳೆದ ಮೂರು ವರ್ಷಗಳಿಂದ ಈ ಸೋಂಕಿಗೆ ಒಂದು ಮಿಲಿಯನ್ಗೂ ಹೆಚ್ಚಿನ ಜನರು ಸಾವನ್ನಪ್ಪಿದ್ದಾರೆ.
2019ರಲ್ಲಿ ವುಹಾನ್ನಲ್ಲಿ ಪತ್ತೆ: 2019ರ ನವೆಂಬರ್ನಲ್ಲಿ ಚೀನಾದ ವುಹಾನ್ನಲ್ಲಿ ಮೊದಲ ಬಾರಿಗೆ ಈ ಸೋಂಕು ಪತ್ತೆಯಾಗಿತ್ತು. ವುಹಾನ್ನಲ್ಲಿ ಸೋಂಕು ಪತ್ತೆಯಾಗುತ್ತಿದ್ದಂತೆ ಚೀನಾ ಕಟ್ಟು ನಿಟ್ಟಿನ ಲಾಕ್ಡೌನ್, ಕ್ವಾರಂಟೈನ್ ಮತ್ತು ಪ್ರಯಾಣ ನಿಯಮಗಳನ್ನು ಆರಿಗೆ ತಂದಿತು. ಇದನ್ನು ಇಂದಿಗೂ ಇಲ್ಲಿನ ಜನರು ಅನುಭವಿಸುತ್ತಿರುವುದು ಕಾಣಬಹುದಾಗಿದೆ. ಆರಂಭದಲ್ಲಿ ವುಹಾನ್ನ ಸೀಫುಡ್ ಮಾರ್ಕೆಟ್ನಲ್ಲಿ ಮೊದಲ ಬಾರಿಗೆ ಈ ಸೋಂಕು ಪತ್ತೆಯಾಯಿತು ಎಂದು ನಂಬಲಾಗಿತ್ತು. ಇನ್ನು ವುಹಾನ್ ಕೋವಿಡ್ ಸೋಂಕಿನ ಮೂಲ ಎಂಬುದನ್ನು ಚೀನಾ ಮಾತ್ರ ನಿರಾಕರಿಸಿದೆ. ಈ ಸೋಂಕು ಹೊರಗಿನಿಂದ ಬಂದಿದ್ದು, ಕೋವಿಡ್ ಸೋಂಕಿಗೆ ಕಾರಣ ತಾವಲ್ಲ ಎಂದು ವಾದಿಸಿದೆ.
ಇದನ್ನೂ ಓದಿ: ಕೋವಿಡ್ ಮಾತ್ರವಲ್ಲ, ಎಲ್ಲ ರೀತಿಯ ಸೋಂಕು ಪತ್ತೆ ಮಾಡುತ್ತದೆ ಈ ಆರ್ಟಿಪಿಸಿಆರ್ ಮಷಿನ್: ಇದರ ಬಳಕೆ ಬಲು ಸುಲಭ