ನವದೆಹಲಿ: ಜುಲೈ 3 ಜಾಗತಿಕವಾಗಿ ಅತಿ ಹೆಚ್ಚು ಬಿಸಿಲಿನ ತಾಪಕ್ಕೆ ಒಳಗಾದ ದಿನ ಎಂದು ಪರಿಸರ ವಿಜ್ಞಾನಿಗಳು ತಿಳಿಸಿದ್ದಾರೆ. ಅಮೆರಿಕ ಸರ್ಕಾರದ ರಾಷ್ಟ್ರೀಯ ಹವಾಮಾನ ಮುನ್ಸೂಚನೆ ಕೇಂದ್ರ ದತ್ತಾಂಶ ವಿಶ್ಲೇಷಿಸಿ ಈ ಮಾಹಿತಿ ನೀಡಲಾಗಿದೆ. ಜುಲೈ ಮೂರರಂದು ಸರಾಸರಿ ತಾಪಮಾನ 17.01 ಡಿಗ್ರಿ ಸೆಲ್ಸಿಯಸ್ ಆಗಿದ್ದು, ಇದು ಈ ಹಿಂದಿನ ದಾಖಲೆ ಮುರಿದಿದೆ. 2016ರಲ್ಲಿ ಜಾಗತಿಕವಾಗಿ 16.92 ಡಿಗ್ರಿ ಉಷ್ಣಾಂಶ ಕಂಡುಬರುವ ಮೂಲಕ ಹಾಟೆಸ್ಟ್ ಡೇ ಎಂದು ಪರಿಗಣಿಸಲಾಗಿತ್ತು. ಸೋಮವಾರದ ತಾಪಮಾನ 0.8 ಡಿಗ್ರಿ ಹೆಚ್ಚು ಬಿಸಿಯಾಗಿದ್ದು, ಇದು 20ನೇ ಶತಮಾನದ ಬಳಿಕದ ಸರಾಸರಿ ಬಿಸಿಲ ದಿನವಾಗಿದೆ. ಮಾನವನ ಮಿತಿ ಮೀರಿದ ಚಟುವಟಿಕೆಗಳೇ ಜಾಗತಿಕ ತಾಪಮಾನ ಏರಿಕೆಗೆ ಕಾರಣ.
ಜಾಗತಿಕ ತಾಪಮಾನದ ಈ ದಾಖಲಾತಿಯು ಹವಾಮಾನ ಬದಲಾವಣೆಯ ಫಲಿತಾಂಶ. ಜೊತೆಗೆ ಪಳೆಯುಳಿಕೆ ಇಂಧನ ಸುಡುವುದು ಮತ್ತು ಇತರೆ ಮಾನವ ಚಟುವಟಿಕೆ ಹಾಗೂ ಎಲ್ ನೀನೊ ಹವಾಮಾನದ ಮಾದರಿ ಸಂಯೋಜನೆಯಾಗಿದೆ. ಅಮೆರಿಕದ ವಿಜ್ಞಾನಿ ರಾಬೊರ್ಟ್ ರೊಹ್ದೆ ಮತ್ತು ಅಮೆರಿಕದ ಆದಾಯೇತರ ಪರಿಸರ ಸಂಶೋಧನಾ ಸಂಘಟನೆಗಳ ಇತರೆ ವಿಜ್ಞಾನಿಗಳು ಈ ಬದಲಾವಣೆಯನ್ನು ದೃಢಪಡಿಸಿದ್ದಾರೆ. ಅಷ್ಟೇ ಅಲ್ಲ, ಮುಂಬರುವ ವಾರದಲ್ಲಿ ಈ ದಾಖಲೆ ಕೂಡ ಮುರಿಯುವ ಸಾಧ್ಯತೆಯೂ ಇದೆ ಎಂದು ರೊಹ್ದೆ ಎಚ್ಚರಿಸಿದ್ದಾರೆ.
ಇತ್ತೀಚಿನ ಐಪಿಸಿಸಿ ವರದಿಯನುಸಾರ, ಜಾಗತಿಕ ತಾಪಮಾನ ಹೆಚ್ಚುತ್ತಿದೆ. 1,25,000 ವರ್ಷಗಳಿಗಿಂತ ಈ ಬೆಳವಣಿಗೆ ಹೆಚ್ಚಾಗಿದೆ. ಜುಲೈ 3ರಂದು ಟೆಕ್ಸಾಸ್ ಮತ್ತು ಅಮೆರಿದ ದಕ್ಷಿಣದ ಬಹುತೇಕ ಭಾಗದಲ್ಲಿ ಹೆಚ್ಚಿನ ತಾಪಮಾನ ದಾಖಲಾಗಿದೆ. ಹರಿಸರ ಕೇಂದ್ರ ವಿಶ್ಲೇಷಿಸುವಂತೆ ಮಾನವಪ್ರೇರಿತ ಹವಾಮಾನ ಬದಲಾವಣೆಯಿಂದಾಗಿ ಅಂತಹ ತಾಪಮಾನಗಳು ಕನಿಷ್ಠ ಐದು ಪಟ್ಟು ಹೆಚ್ಚಾಗಲಿದೆ.
ಕೆನಡಾದಲ್ಲಿ ಕಾಡ್ಗಿಚ್ಚು ನಿರಂತವಾಗಿದೆ. ಇದು ಕೆನಡಾದ ಇತಿಹಾದಲ್ಲೇ ಅತಿ ಕೆಟ್ಟ ಘಟನೆಯಾಗಿದೆ. ಈಗಾಗಲೇ 8.4 ಮಿಲಿಯನ್ ಹೆಕ್ಟೇರ್ ಕಾಡು ನಾಶವಾಗಿದೆ. ಕಾಡ್ಗಿಚ್ಚಿನ ಹೊಗೆ ಅಮೆರಿಕ ಮತ್ತು ದೇಶದ ಬಹುಭಾಗದ ಗಾಳಿಯ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ.
ಚೀನಾದಲ್ಲಿ ನಿರಂತರ ತಾಪಮಾನ ಹೆಚ್ಚುತ್ತಿದ್ದು, 35 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಬಹುತೇಕ ಭಾಗದಲ್ಲಿ ಪ್ರವಾಹ ಕೂಡ ಪರಿಣಾಮ ಬೀರಿದೆ. ಪರಿಸರ ಬದಲಾವಣೆಯಿಂದ ಶಾಖದ ಅಲೆ ಐದು ಪಟ್ಟು ಹೆಚ್ಚಾಗಿದೆ ಎಂದು ಪರಿಸರ ಕೇಂದ್ರ ತಿಳಿಸಿದೆ.
ಭಾನುವಾರ 2023ರ ಮೊದಲಾರ್ಧದಲ್ಲಿ ಹೊಸ ತಾಪಮಾನ ಅಂದರೆ 35 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, 1961ರ ಬಳಿಕ ದಾಖಲಾದ ಅತಿ ಹೆಚ್ಚಿನ ತಾಪಮಾನವಿದು. ಉತ್ತರ ಆಫ್ರಿಕಾದಲ್ಲಿ ಕೂಡ ಬಿಸಿ ಗಾಳಿ ಮುಂದುವರೆದಿದೆ. ಸಮುದ್ರ ತಾಪಮಾನ ಕೂಡ ಏರಿಕೆ ಕಂಡಿದೆ. ತೀವ್ರವಾದ ಸಮುದ್ರದ ಶಾಖದಲೆಯು ಸಮುದ್ರ ಜೀವಿಗಳಿಗೆ ಅಪಾಯ ಉಂಟುಮಾಡುತ್ತದೆ. ಅಂಟಾರ್ಕ್ಟಿಕ್ ಪ್ರದೇಶವು ಕೂಡ ಹೆಚ್ಚಿನ ತಾಪಮಾನ ಅನುಭವಿಸಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: ನಾಸಾದ ವರ್ಚುಯಲ್ ಮಾರ್ಸ್ ಸಿಮ್ಯುಲೇಶನ್‌ನಲ್ಲಿ 4 ಗಗನಯಾತ್ರಿಗಳು.. ಇವರು ಒಂದು ವರ್ಷದವರೆಗೆ ಏಕೆ ಲಾಕ್ ಆಗ್ತಾರೆ ಗೊತ್ತಾ?