ಯಾದಗಿರಿ: ಕೃಷಿ ಇಲಾಖೆಯಿಂದ ಖಾಸಗಿ ಏಜೆನ್ಸಿಗಳ ಮೂಲಕ ಪೂರೈಕೆಯಾದ ಪೈಪ್ಗಳು ಕಳಪೆ ಮಟ್ಟದಿಂದ ಕೂಡಿವೆ. ಅಲ್ಲದೇ ಒಂದೇ ಏಜನ್ಸಿ ಮೂಲಕ ರೈತರು ಪೈಪ್ ಪಡೆಯಬೇಕೆಂದು ಅಧಿಕಾರಿಗಳು ರೈತರಿಗೆ ಒತ್ತಾಯ ಹಾಕಿದ್ದು ಈ ಬಗ್ಗೆ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಪಂಚಾಯತ್ ಸದಸ್ಯ ಬಸರೆಡ್ಡಿ ಪಾಟೀಲ ಆಗ್ರಹಿಸಿದರು.
ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಇಂದು ಜಿಲ್ಲಾ ಪಂಚಾಯತ ಅಧ್ಯಕ್ಷ ಬಸನಗೌಡ ಯಡಿಯಾಪೂರ ನೇತೃತ್ವದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನಡೆದ ಪೈಪ್ಗಳ ವಿತರಣೆ ಚರ್ಚೆಯಲ್ಲಿ, ರೈತ ಸಂಪರ್ಕ ಕೇಂದ್ರದಲ್ಲಿ ಈಗಾಗಲೇ ಪೈಪ್ಗಳು ಪೂರೈಕೆಯಾಗಿದ್ದು ಆ ಪೈಪ್ಗಳನ್ನು ಮಾತ್ರ ಖರೀದಿ ಮಾಡಬೇಕೆಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ರೈತರು ಖರೀದಿ ಮಾಡುವ ಮುನ್ನವೇ ರೈತ ಸಂಪರ್ಕ ಕೇಂದ್ರಕ್ಕೆ ಅದು ಹೇಗೆ ಖಾಸಗಿ ಏಜೆನ್ಸಿ ಪೈಪ್ ಪೂರೈಕೆ ಮಾಡಿದೆ. ಯಾದಗಿರಿಯಲ್ಲಿ ಸಾಕಷ್ಟು ಏಜನ್ಸಿಗಳಿದ್ದು ಉತ್ತಮ ಪೈಪ್ ಪೂರೈಕೆ ಮಾಡುವ ಏಜನ್ಸಿಗಳಿಂದ ಪೈಪ್ ಪೂರೈಕೆ ಮಾಡದೆ ಕೆಲ ಅಧಿಕಾರಿಗಳು ಶಾಮೀಲಾಗಿ ಕಳಪೆ ಪೈಪ್ ನೀಡಲಾಗುತ್ತಿದೆ ಎಂದು ಕೆಲ ಸದಸ್ಯರು ಅಕ್ರೋಶ ವ್ಯಕ್ತಪಡಿಸಿದರು.
ಅದೆ ರೀತಿ ಎಸ್ಸಿ ಹಾಗೂ ಎಸ್ಟಿ ಸಮುದಾಯದ ಯೋಜನೆಗಳನ್ನು ಸಾಮಾನ್ಯ ರೈತರಿಗೆ ನೀಡಲಾಗುತ್ತಿದೆ. ಈ ಕುರಿತು ತನಿಖೆ ನಡೆಸುವ ಮೂಲಕ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕಿದೆ ಎಂದು ಜಿಲ್ಲಾ ಪಂಚಾಯತ ಸದಸ್ಯರು ಆಗ್ರಹಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಸನಗೌಡ ಪಾಟೀಲ್ ಯಡಿಯಾಪುರ, ಉಪಾಧ್ಯಕ್ಷೆ ಗಿರಿಜಮ್ಮಾ ಸದಾಶಿವಪ್ಪಗೌಡ, ಜಿಲ್ಲಾ ಪಂಚಾಯತ್ ಸಿಇಓ ಶಿಲ್ಪಾ ಶರ್ಮ ಸೇರಿದಂತೆ ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ಸಂಬಂಧಿಸಿದ ಅಧಿಕಾರಿಗಳು ಉಪಸ್ಥಿತರಿದ್ದರು..