ಯಾದಗಿರಿ: ಜಿಲ್ಲೆಯಲ್ಲಿ ಡೆಡ್ಲಿ ಕೊರೊನಾ ವೈರಸ್ ಸುನಾಮಿಯಂತೆ ಅಪ್ಪಳಿಸುತ್ತಿದ್ದು, ಇಂದು ಒಂದೇ ದಿನ 74 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ಸೋಂಕಿತರ ಸಂಖ್ಯೆ 373ಕ್ಕೆ ಏರಿಕೆಯಾಗಿದೆ.
ಮಹಾರಾಷ್ಟ್ರದಿಂದ ವಾಪಸ್ ಆದ 73 ಜನ ವಲಸೆ ಕಾರ್ಮಿಕರು ಮತ್ತು ಶಹಪುರ ಪೊಲೀಸ್ ಠಾಣೆಯ ಕಾನ್ಸ್ಸ್ಟೇಬಲ್ ಸೇರಿದಂತೆ ಯಾದಗಿರಿ ಜಿಲ್ಲೆಯಲ್ಲಿ 74 ಜನರಲ್ಲಿ ಇಂದು ಕೊರೊನಾ ಸೋಂಕು ದೃಢಪಟ್ಟಿದೆ. ಇತ್ತೀಚೆಗೆ ಮಹಾರಾಷ್ಟ್ರದಿಂದ ಆಗಮಿಸಿದ ಈ ಕಾರ್ಮಿಕರೆಲ್ಲರನ್ನು ಜಿಲ್ಲೆಯ ವಿವಿಧ ಕ್ವಾರಂಟೈನ್ ಕೇಂದ್ರಗಳಲ್ಲಿ ಇರಿಸಲಾಗಿತ್ತು. ಸೋಂಕಿಗೆ ತುತ್ತಾದ ಶಹಪುರ ಪೊಲೀಸ್ ಠಾಣೆಯ ಕಾನ್ಸ್ಸ್ಟೇಬಲ್ಗೆ ಹೋಮ್ ಕ್ವಾರಂಟೈನ್ ಮಾಡಲಾಗಿತ್ತು. ಇಂದು ಇವರ ವರದಿ ಪಾಸಿಟಿವ್ ಎಂದು ಬಂದಿದೆ. ಇವರನ್ನೆಲ್ಲಾ ಚಿಕಿತ್ಸೆಗಾಗಿ ಜಿಲ್ಲೆಯ ನಿಗದಿತ ನೂತನ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಿಲ್ಲಾಡಳಿತದ ಯಡವಟ್ಟಿನಿಂದ ಕ್ವಾರಂಟೈನ್ ಕೇಂದ್ರದಿಂದ ಬಿಡುಗಡೆಗೊಳಿಸಿದ ವ್ಯಕ್ತಿಗಳಿಂದ ಯಾದಗಿರಿ ತಾಲೂಕಿನ ಅಲ್ಲಿಪುರ ತಾಂಡಾ ಹಾಗೂ ಕಂಚಗಾರಹಳ್ಳಿಯ 23 ಕಾರ್ಮಿಕರಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ. ಕ್ವಾರಂಟೈನ್ನಲ್ಲಿದ್ದ ವ್ಯಕ್ತಿಗಳ ಗಂಟಲು ದ್ರವದ ಪರೀಕ್ಷಾ ವರದಿ ಬರುವ ಮೊದಲೇ ಇವರನ್ನ ಮನೆಗೆ ಕಳುಹಿಸಿ 14 ದಿನ ಹೋಮ್ ಕ್ವಾರಂಟೈನ್ನಲ್ಲಿ ಇರಿಸಲಾಗಿತ್ತು.
ಆದ್ರೆ ಇವರು ಮನೆಯಲ್ಲಿ ಇರದೆ ಊರೆಲ್ಲಾ ಸುತ್ತಾಡಿದ್ದಾರೆ. ಈ 23 ಕಾರ್ಮಿಕರಲ್ಲಿ 16 ಜನರನ್ನ ಜಿಲ್ಲಾಡಳಿತ ವಶಕ್ಕೆ ಪಡೆದಿದ್ದು, ಇನ್ನೂ 7 ಜನರನ್ನ ಪತ್ತೆ ಹಚ್ಚಲು ಹರಸಾಹಸ ಪಡುತ್ತಿದೆ.