ಯಾದಗಿರಿ: ಜಿಲ್ಲೆಯ ಹುಣಸಗಿ ತಾಲೂಕಿನ ಬಸವ ಸಾಗರ ಜಲಾಶಯದಿಂದ ಕೃಷ್ಣ ನದಿಗೆ ನೀರು ಹರಿ ಬಿಡುತ್ತಿದ್ದು, ನದಿ ಪಾತ್ರದ ಜನರು ಭಯದಿಂದ ಜೀವನ ನಡೆಸುವಂತಾಗಿದೆ.
ಮಹಾರಾಷ್ಟ್ರದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿರುವುದರಿಂದ ಆಲಮಟ್ಟಿ ಜಲಾಶಯ ಭರ್ತಿಯಾಗಿ ಅಪಾಯದ ಮಟ್ಟಕ್ಕೆ ತಲುಪುತ್ತಿದೆ. ಹೀಗಾಗಿ ಆಲಮಟ್ಟಿ ಡ್ಯಾಂನಿಂದ ಬಸವ ಸಾಗರ ಜಲಾಶಯಕ್ಕೆ 2,15,350 ಕ್ಯೂಸೆಕ್ ನೀರನ್ನು ಹರಿಬೀಡಲಾಗಿದೆ. ಇತ್ತ ಬಸವ ಸಾಗರ ಜಲಾಶಯವು ತುಂಬುತ್ತಿದ್ದಂತೆ ಎಚ್ಚೆತ್ತಕೊಂಡ ಕೆಬಿಜೆಎನ್ಎಲ್ ಅಧಿಕಾರಿಗಳು, 24 ಗೇಟುಗಳ ಪೈಕಿ 20 ಗೇಟುಗಳ ಮುಖಾಂತರ 2,25,000 ಕ್ಯೂಸೆಕ್ ನೀರನ್ನು ಕೃಷ್ಣ ನದಿಗೆ ಹರಿಬಿಟ್ಟಿದ್ದಾರೆ.
ಕೃಷ್ಣ ನದಿ ಸುತ್ತ ಮುತ್ತಲಿರುವ ಗ್ರಾಮಗಳಾದ ನೀಲಕಂಠರಾಯನ ಗಡ್ಡಿ, ಕೊಳ್ಳೂರ, ಗೂಗಲನ್ಗೆ ಸಂಪರ್ಕ ಕಲ್ಪಿಸುವ ಸೇತುವೆಗಳು ತುಂಬಿ ಅಪಾಯದ ಮಟ್ಟ ತಲುಪಿವೆ. ಕೊಳ್ಳೂರ ಸೇತುವೆ ಮುಳಗಡೆಯಾಗಲು ಇನ್ನೂ ಕೇವಲ ಎರಡು ಅಡಿ ಮಾತ್ರ ಬಾಕಿಯಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಇಲಾಖೆ ಸಿಬ್ಬಂದಿ ನಿಯೋಜಿಸಲಾಗಿದೆ.
ನದಿಯ ದಡದ ಅಕ್ಕ ಪಕ್ಕದ ಜಮೀನುಗಳು ಸಂಪೂರ್ಣವಾಗಿ ಜಲಾವೃತ್ತವಾಗಿದ್ದು, ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಮಹಾರಾಷ್ಟ್ರದಲ್ಲಿ ಮಳೆ ಹೆಚ್ಚಾಗುತ್ತಿರುವ ಹಿನ್ನೆಲೆ ಕೃಷ್ಣ ನದಿಗೆ ನೀರು ಹರಿಸುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ನದಿ ಪಾತ್ರದ ಜನರು ಸೂಕ್ತ ಪ್ರದೇಶಗಳಿಗೆ ವಲಸೆ ಹೋಗುವ ಸಾಧ್ಯತೆ ಹೆಚ್ಚಿದೆ.