ಯಾದಗಿರಿ: ವಿವಿಧ ಬೇಡಿಕೆಗಳ ಈಡೆರಿಕೆಗೆ ಆಗ್ರಹಿಸಿ ಇಂದು ಸಾರಿಗೆ ನೌಕರರು ಕರೆದ ಮುಷ್ಕರದ ಬಿಸಿ ಯಾದಗಿರಿ ಜಿಲ್ಲೆಗೂ ತಟ್ಟಿದ್ದು, ವೃದ್ಧೆ ಸೇರಿದಂತೆ ಅನಾರೋಗ್ಯದಿಂದ ಬಳಲುತ್ತಿದ್ದ ಹಸುಗೂಸಿನೊಂದಿಗೆ ಕೇಂದ್ರ ಬಸ್ ನಿಲ್ದಾಣಕ್ಕೆ ಆಗಮಿಸಿದ ಬಾಣಂತಿ ಕೂಡ ಪರದಾಡುವಂತಾಯಿತು.
ಸಾರಿಗೆ ಬಸ್ ರಸ್ತೆಗಿಳಿಯದ ಪರಿಣಾಮ ಬೆರಳೆಣಿಕೆಯಷ್ಟು ಜನ ಸಾರಿಗೆ ನೌಕರರ ಮುಷ್ಕರದ ಮಾಹಿತಿಯಿಲ್ಲದೆ ಯಾದಗಿರಿ ನಗರದ ಕೇಂದ್ರ ಬಸ್ ನಿಲ್ದಾಣಕ್ಕೆ ಆಗಮಿಸಿ ಪರಿತಪಿಸುವಂತಾಯಿತು. ಅದರಲ್ಲೂ ಅನಾರೋಗ್ಯದಿಂದ ಬಳಲುತ್ತಿದ್ದ ಹಸುಗೂಸಿನೊಂದಿಗೆ ಆಗಮಿಸಿದ ಹೊನ್ನಾಕೇರಾ ಗ್ರಾಮದ ಬಾಣಂತಿ ಒಬ್ಬರು ಮಗುವನ್ನ ಚಿಕಿತ್ಸೆಗಾಗಿ ಪಕ್ಕದ ಜಿಲ್ಲೆ ರಾಯಚೂರಿಗೆ ಕರೆದುಕೊಂಡು ಹೋಗಲು ಬಸ್ ಇಲ್ಲದ ಕಾರಣ ಪರಿತಪಿಸುವಂತಾಯಿತು.
ಯಾದಗಿರಿ ಕೇಂದ್ರದಿಂದ ರಾಯಚೂರಿನ ದೇವದುರ್ಗಕ್ಕೆ ತೆರಳಲು ಆಗಮಿಸಿದ್ದ ವೃದ್ಧೆ ಬಸ್ ಇಲ್ಲದ ಕಾರಣ ದಿಕ್ಕು ತೋಚದಂತೆ ಬಸ್ ನಿಲ್ದಾಣದಲ್ಲಿ ಪರದಾಡುವಂತಾಯಿತು. ಹೀಗೆ ಜಿಲ್ಲಾ ಕೇಂದ್ರದಿಂದ ಬೇರೆಡೆ ಹೋಗಬೇಕಾದ ಪ್ರಯಾಣಿಕರು ಮುಷ್ಕರದ ಹಿನ್ನೆಲೆ ಸಾಕಷ್ಟು ತೊಂದರೆ ಅನುಭವಿಸಿದರು.