ಗುರುಮಠಕಲ್ : ಪಟ್ಟಣದ ಲಕ್ಷ್ಮಿನಗರದಲ್ಲಿ ನಿರ್ಮಾಣವಾದ ಸಾರ್ವಜನಿಕ ಉದ್ಯಾನವನವನ್ನು ಶಾಸಕ ನಾಗನಗೌಡ ಕಂದಕೂರ ಉದ್ಘಾಟಿಸಿದರು. ಪಟ್ಟಣದ ಲಕ್ಷ್ಮಿನಗರ ಬಡಾವಣೆಯಲ್ಲಿ ಸಾರ್ವಜನಿಕ ಉದ್ಯಾನವನವನ್ನು ರಿಬ್ಬನ್ ಕತ್ತರಿಸುವ ಮೂಲಕ ಜನ ಬಳಕೆಗೆ ಮುಕ್ತಗೊಳಿಸಿ ಮಾತನಾಡಿದ ಅವರು, 14 ತಿಂಗಳು ಕುಮಾರಸ್ವಾಮಿಯವರು ಅಧಿಕಾರದಲ್ಲಿರುವಾಗ ಕ್ಷೇತ್ರದ ಸಂಪೂರ್ಣ ಅಭಿವೃದ್ಧಿಗೆ ಅವಶ್ಯವಾದ ಅನುದಾನ ನೀಡಿದ್ದರು.
ಜತೆಗೆ ಇನ್ನೂ ಹೆಚ್ಚಿನ ಅನುದಾನ ಒದಗಿಸುವ ಭರವಸೆ ನೀಡಿದ್ದರು. ನಂತರ ವಾಮಮಾರ್ಗದಿಂದ ಅಧಿಕಾರಕ್ಕೆ ಬಂದ ಯಡಿಯೂರಪ್ಪನವರು ನಮ್ಮ ಕ್ಷೇತ್ರಕ್ಕೆ ನೀಡಿದ್ದ ಅನುದಾನವನ್ನು ಹಿಂಪಡೆದಿದ್ದಾರೆ. ಅವರ ಅವಧಿಯಲ್ಲಿ ಒಂದು ರೂಪಾಯಿ ನೀಡದಿದ್ದರೂ ಚಿಂತೆಯಿಲ್ಲ. ಆದರೆ, ಮೊದಲು ನೀಡಿದ್ದ ಅನುದಾನವನ್ನಾದ್ರೂ ನೀಡಲಿ ಎಂದು ಆಗ್ರಹಿಸಿದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆಯಡಿ ₹50 ಲಕ್ಷ ವೆಚ್ಚದಲ್ಲಿ ಈ ಕಾಮಗಾರಿ ಕೈಗೊಳ್ಳಲಾಗಿದೆ. ಈ ಉದ್ಯಾನವನವನ್ನು ಸಂರಕ್ಷಿಸುವುದು ಸ್ಥಳೀಯರ ಜವಾಬ್ದಾರಿ ಎಂದು ತಿಳಿಸಿದರು. ಎಲ್ಲರೂ ಸೇರಿ ಉದ್ಯಾನವನವನ್ನು ರಕ್ಷಿಸಿಕೊಳ್ಳಬೇಕು, ಉದ್ಯಾನವನದ ಸೌಂದರ್ಯ, ಸ್ವಚ್ಛತೆ ಕಾಪಾಡಿಕೊಂಡ್ರೆ ನಮ್ಮ ಆರೋಗ್ಯವನ್ನು ಅದು ಕಾಪಾಡಲಿದೆ. ಉದ್ಯಾನವನದದ ನಿರ್ವಹಣೆಗೆ ಸ್ಥಳೀಯರು ಸಲಹೆಗಳನ್ನು ನೀಡುವ ಮೂಲಕ ಉದ್ಯಾನವನವನ್ನು ಇನ್ನೂ ಉತ್ತಮವಾಗಿ ರೂಪಿಸಿ ಮಾದರಿಯಾಗಿಸಬಹುದು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಸನಗೌಡ ಯಡಿಯಾಪುರ ಅವರು, ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಎಲ್ಲೆಡೆಯೂ ಉದ್ಯಾನವನಗಳನ್ನು ಅಭಿವೃದ್ಧಿಗೊಳಿಸಬೇಕಿದೆ. ಈಗಾಗಲೇ ಅಧಿಕಾರಿಗಳೊಡನೆ ಮಾತನಾಡಿ ಅದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡುವಂತೆ ಸೂಚಿಸಿದ್ದೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಪಾಪಣ್ಣ ಮನ್ನೆ, ಉಪಾಧ್ಯಕ್ಷೆ ಭೀಮಮ್ಮ, ತಹಶೀಲ್ದಾರ್ ಸಂಗಮೇಶ ಜಿಡಗೆ, ತಾಪಂ ಅಧ್ಯಕ್ಷ ಈಶ್ವರ ನಾಯಕ, ಪುರಸಭೆ ಸದಸ್ಯ ಬಾಲಪ್ಪ ದಾಸರಿ, ಸುರೇಶ ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.