ಯಾದಗಿರಿ : ಕಳೆದ 7-8 ತಿಂಗಳಿನಿಂದ ರಾಜ್ಯದಲ್ಲಿ ಕೊರೊನಾ ವೈರಸ್‌ನಿಂದಾಗಿ ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ಆರೋಗ್ಯ ಹಸ್ತ ನಿರ್ವಹಣಾ ಸಮಿತಿ ಮೂಲಕ ಎಲ್ಲಾ ಜಿಲ್ಲೆಗಳಲ್ಲಿ ವೈದ್ಯರ ತಂಡದ ಸಹಕಾರದಿಂದ ವಾರಿಯರ್ಸ್ಗೆ ಆರೋಗ್ಯ ತಪಾಸಣೆ ತರಬೇತಿ ನೀಡಲು ಮುಂದಾಗಿದೆ. ಜನರ ಆರೋಗ್ಯ ಪರೀಕ್ಷೆಯಲ್ಲಿ ನೆರವಿಗೆ ನಿಲ್ಲುವ ಮೂಲಕ ನಿಯಂತ್ರಣಕ್ಕೆ ಶ್ರಮಿಸುತ್ತಿದೆ ಎಂದು ಮಾಜಿ ಸಂಸದ ಹಾಗೂ ಕೆಪಿಸಿಸಿ ಆರೋಗ್ಯ ನಿರ್ವಹಣಾ ಸಮಿತಿ ಅಧ್ಯಕ್ಷ ಆರ್ ಧ್ರುವನಾರಾಯಣ ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರಿಗೆ ವೈದ್ಯರಿಂದ ಆರೋಗ್ಯ ತಪಾಸಣೆ ಮಾಡುವ ಕುರಿತು ತರಬೇತಿ ಕಾರ್ಯಕ್ರಮದ ನಂತರ ಕೊರೊನಾ ವಾರಿಯರ್ಸ್ಗಳಿಗೆ ಆರೋಗ್ಯ ಹಸ್ತ ಕಿಟ್‌ಗಳನ್ನು ವಿತರಿಸಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಪ್ರಾರಂಭದ ಹಂತದಲ್ಲಿ ಕೈಗೊಂಡ ತಪ್ಪು ನಿರ್ಧಾರದಿಂದ ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಇಂದು ವೈರಸ್ ದಾಳಿಗೆ ಬಲಿಯಾಗುತ್ತಿದ್ದಾರೆ ಎಂದು ಟೀಕಿಸಿದರು.
ರಾಜ್ಯದಲ್ಲಿ ಸರ್ಕಾರ ಕೋವಿಡ್ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಅವರು ಮಾಡಬೇಕಾದ ಕೆಲಸವನ್ನು ಜನಪರ ಕಾಳಜಿ ಹೊಂದಿರುವ ಕಾಂಗ್ರೆಸ್ ಪಕ್ಷವು ಪ್ರಾರಂಭದಲ್ಲಿ ಲಾಕ್‍ಡೌನ್ ಜಾರಿ ಸಂದರ್ಭದಲ್ಲಿ ಉದ್ಯೋಗ ಅರಸಿ ಬೆಂಗಳೂರಿಗೆ ಬಂದು ನೆಲೆಸಿದ್ದ 5 ಲಕ್ಷ ಜನರಿಗೆ ಪ್ರತಿದಿನ ಆಹಾರ ನೀಡುವುದರ ಜೊತೆಗೆ ಅವರವರ ಗ್ರಾಮಗಳಿಗೆ ತೆರಳಲು ನೆರವಾಯ್ತು ಎಂದು ತಿಳಿಸಿದರು.
ನಾನು ಈಗಾಗಲೇ ರಾಜ್ಯದ 27 ಜಿಲ್ಲೆಗಳಿಗೆ ಭೇಟಿ ನೀಡಿದ್ದೇನೆ. ಪಕ್ಷದಿಂದ ಸುಮಾರು 15 ಸಾವಿರ ವಾರಿಯರ್ಸ್ಗಳನ್ನು ತಯಾರು ಮಾಡಿ ನೇಮಕ ಮಾಡಿ 6 ಕೋಟಿ ರೂ. ವೆಚ್ಚ ಮಾಡಿದ್ದೇವೆ. ಇದರಲ್ಲಿ 4 ಕೋಟಿ ಆರೋಗ್ಯ ತಪಾಸಣಾ ಉಪಕರಣಗಳಿವೆ ಎಂದು ಮಾಹಿತಿ ನೀಡಿದರು. ನಾವು ರಾಜ್ಯದಲ್ಲಿ ಈಗಾಗಲೇ ಸುಮಾರು 5,500 ಆರೋಗ್ಯ ಹಸ್ತ ಕಿಟ್‍ಗಳನ್ನು ಎಲ್ಲಾ ವಿಧಾನಸಭಾ ಕ್ಷೇತ್ರಗಳ ಗ್ರಾಪಂ ಮಟ್ಟದಲ್ಲಿ ನೀಡಲಾಗಿದೆ. ವಾರಿಯರ್ಸ್ಗಳ ಪ್ರತಿ ತಂಡಕ್ಕೆ 1 ಲಕ್ಷ ರೂ. ಜೀವವಿಮೆ ಮಾಡಿಸಲಾಗಿದೆ ಎಂದರು.
ಈ ಹಿಂದೆ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಜಾರಿಗೆ ತಂದಿರುವ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಎಂಬ ಜನಪರ ಯೋಜನೆ ಜಾರಿಗೆ ತಂದಿತು. ಆ ಸಂದರ್ಭದಲ್ಲಿ ಬಿಜೆಪಿ ಸಂಸದರು ಯೋಜನೆಯನ್ನು ಲೋಕಸಭೆಯಲ್ಲಿ ಟೀಕಿಸಿ ಲಘುವಾಗಿ ಮಾತನಾಡಿದರು. ಆದರೆ, ಲಾಕ್‍ಡೌನ್ ಸಂದರ್ಭದಲ್ಲಿ ಕಾರ್ಮಿಕರಿಗೆ ಇದೆ ಯೋಜನೆ ಮೂಲಕ ಉದ್ಯೋಗ ನೀಡಲಾಯಿತು. ಬಿಜೆಪಿಯಿಂದ ಯಾವುದೇ ಜನಪರ ಯೋಜನೆ ಜಾರಿಯಾಗಲಿಲ್ಲ ಎಂದು ಬಿಜೆಪಿ ಆಡಳಿತ ಕಾರ್ಯ ವೈಖರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ವಿಧಾನ ಪರಿಷತ್ ಸದಸ್ಯ ಚನ್ನಾರೆಡ್ಡಿ ಪಾಟೀಲ್ ತುನ್ನೂರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮರಿಗೌಡ ಪಾಟೀಲ್ ಹುಲಕಲ್, ಶ್ರೀನಿವಾಸರೆಡ್ಡಿ ಕಂದಕೂರ ಹಾಗೂ ವೈದ್ಯರ ತಂಡ ಉಪಸ್ಥಿತರಿದ್ದರು.