ಬೆಂಗಳೂರಿನ ಹಿಂಸಾಚಾರ ಪ್ರಕರಣ ದುರ್ದೈವದ ಸಂಗತಿ: ಸಚಿವ ಪ್ರಭು ಚವ್ಹಾಣ್ - ಯಾದಗಿರಿ
ಬೆಂಗಳೂರಿನ ಡಿಜೆ ಹಳ್ಳಿ ಪ್ರಕರಣ ದುರ್ದೈವದ ಸಂಗತಿ, ಹಲ್ಲೆ ಮಾಡಿದ್ದು ಖಂಡನೀಯ. ಇದನ್ನು ನಾನು ಖಂಡಿಸುತ್ತೇನೆ ಎಂದು ಸಚಿವ ಪ್ರಭು ಚವ್ಹಾಣ್ ಯಾದಗಿರಿಯಲ್ಲಿಂದು ಹೇಳಿಕೆ ನೀಡಿದ್ದಾರೆ.
![ಬೆಂಗಳೂರಿನ ಹಿಂಸಾಚಾರ ಪ್ರಕರಣ ದುರ್ದೈವದ ಸಂಗತಿ: ಸಚಿವ ಪ್ರಭು ಚವ್ಹಾಣ್ Minister Prabhu Chauhan](https://etvbharatimages.akamaized.net/etvbharat/prod-images/768-512-8396468-3-8396468-1597251978778.jpg?imwidth=3840)
ಯಾದಗಿರಿ: ಬೆಂಗಳೂರಿನ ಡಿಜೆ ಹಳ್ಳಿ ಪ್ರಕರಣ ದುರ್ದೈವದ ಸಂಗತಿ, ಹಲ್ಲೆ ಮಾಡಿದ್ದು ಖಂಡನೀಯ. ಇದನ್ನು ನಾನು ಖಂಡಿಸುತ್ತೇನೆ ಎಂದು ಸಚಿವ ಪ್ರಭು ಚವ್ಹಾಣ್ ಯಾದಗಿರಿಯಲ್ಲಿಂದು ಹೇಳಿಕೆ ನೀಡಿದ್ದಾರೆ.
ಕೃಷ್ಣಾ ನದಿ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ ಬಳಿಕ ಯಾದಗಿರಿ ಸರ್ಕ್ಯೂಟ್ ಹೌಸ್ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಘಟನೆಗೆ ಸಂಬಂಧಿಸಿದಂತೆ ಈಗಾಗಲೇ 155 ಜನರ ಮೇಲೆ ಪ್ರಕರಣ ದಾಖಲಾಗಿದೆ. ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಪ್ರಕರಣಕ್ಕೆ ಸಂಬಂಧಿಸಿದಂತೆ ಕಠಿಣ ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದಾರೆ ಎಂದು ತಿಳಿಸಿದರು.
ಗಲಭೆಯಲ್ಲಿ ಮಾಧ್ಯಮದವರ ಮೇಲೆ ಹಲ್ಲೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಚವ್ಹಾಣ್, ಕೃತ್ಯದಲ್ಲಿ ಯಾರ್ಯಾರು ಭಾಗಿಯಾಗಿದ್ದಾರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು, ಮಾಧ್ಯಮದವರ ಮೇಲೆ ನಡೆದ ಹಲ್ಲೆಗೆ ನ್ಯಾಯ ದೊರಕಿಸಿ ಕೊಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ಪ್ರವಾಹ ಪೀಡಿತ ಪ್ರದೇಶವಾದ ಕೊಳ್ಳೂರು ಬ್ರಿಡ್ಜ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದ್ದು, ಬಸವಸಾಗರದಿಂದ ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟಾಗ ಕೊಳ್ಳೂರ ಬ್ರಿಡ್ಜ್ ಮುಳುಗುವ ಹಂತಕ್ಕೆ ತಲುಪುವ ಮೂಲಕ ರಸ್ತೆ ಸಂಚಾರಕ್ಕೆ ಸಮಸ್ಯೆಯಾಗುತ್ತಿದ್ದು, 100 ಕೋಟಿ ರೂ. ವೆಚ್ಚದಲ್ಲಿ ಸೇತುವೆ ಎತ್ತರವನ್ನು ಹೆಚ್ಚಿಸುವ ಕಾಮಗಾರಿ ಬಗ್ಗೆ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು.