ಯಾದಗಿರಿ : ರಾತ್ರೋರಾತ್ರಿ ಕಳ್ಳತನವಾಗಿದ್ದ ಜೋಡೆತ್ತು ಕಳ್ಳರಿಂದ ತಪ್ಪಿಸಿಕೊಂಡು ಅನ್ನದಾತನನ್ನೇ ಅರಸಿ ಬಂದ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಸಗರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಸಗರ ಗ್ರಾಮದ ರೈತ ತಿರುಪತಿ ಎಂಬವರಿಗೆ ಸೇರಿದ ಜೋಡೆತ್ತುಗಳನ್ನು ಕಳ್ಳರು ತಡರಾತ್ರಿ ಕಳ್ಳತನ ಮಾಡಿದ್ದರು. ಬೆಳಗಿನ ಜಾವ 4 ಗಂಟೆಗೆ ಕೊಟ್ಟಿಗೆ ನೋಡಿದ ರೈತ ತನ್ನ ಎತ್ತುಗಳು ಕಾಣದೆ ಗೋಳಾಡಿದ್ದರು. ಬದುಕಿನ ಬೆನ್ನೆಲುಬಾದ ಎತ್ತುಗಳೇ ಇಲ್ಲದಕ್ಕೆ ಕಂಗಾಲಾಗಿ ಕಣ್ಣೀರಿಟ್ಟಿದ್ದರು. 1.5 ಲಕ್ಷ ರೂಪಾಯಿ ಬೆಲೆಬಾಳುವ ಎತ್ತುಗಳು ಕಳುವಾದವಲ್ಲ ಎಂದು ರೋಧಿಸಿದ್ದರು.
ಗ್ರಾಮಸ್ಥರು ಕಳೆದುಹೋದ ಎತ್ತುಗಳನ್ನು ಹುಡುಕೋಣ ಎಂದು ರೈತ ತಿರುಪತಿಗೆ ಧೈರ್ಯ ತುಂಬಿದ್ದರು. ಕಣ್ಣೀರು ಹಾಕುತ್ತಾ ಎತ್ತುಗಳಿಗಾಗಿ ತಿರುಪತಿ ಕಾಯುತ್ತಾ ಕುಳಿತಿದ್ದರು. ಆದರೆ, ಅದೇನಾಯ್ತೋ ಗೊತ್ತಿಲ್ಲ. ಎತ್ತುಗಳು ಕಳ್ಳರಿಂದ ತಪ್ಪಿಸಿಕೊಂಡು ಸಗರ ಗ್ರಾಮದಲ್ಲಿರುವ ತನ್ನ ಮಾಲೀಕನ ಮನೆಸೇರಿವೆ. ಎತ್ತು ಕಾಣದೆ ಬೇಸರಿಸುತ್ತಾ ಕುಳಿತ ರೈತನಿಗೆ ಎತ್ತುಗಳನ್ನು ನೋಡುತ್ತಿದ್ದಂತೆ ಸಂತೋಷವಾಗಿದೆ. ರೈತ ತಿರುಪತಿ ಮರಳಿ ಬಂದ ಎತ್ತುಗಳ ಮೈಸವರಿ ಪ್ರೀತಿ ತೋರಿದ್ದಾರೆ.
''ರಾತ್ರೋರಾತ್ರಿ ಎತ್ತುಗಳು ಕಳ್ಳತನವಾಗಿದ್ದವು. ಅವುಗಳ ಕೊರಳೊಳಗಿನ ಜಂಗು, ಬಾರು ಕೊಯ್ದು ಕಳ್ಳರು ಎತ್ತುಗಳನ್ನು ವಾಹನದಲ್ಲಿ ಕದ್ದೊಯ್ದಿದ್ದರು. ರಾತ್ರಿ ನೋಡಿದಾಗ ಇರಲಿಲ್ಲ. ಬೆಳಗಿನ ಜಾವ 4 ಗಂಟೆಗೆ ಎದ್ದು ನೋಡಿದರೆ ಮರಳಿ ಮನೆಗೆ ಬಂದಿವೆ'' ಎಂದು ತಿರುಪತಿ ಹೇಳಿದರು.
ಮನೆಮುಂದೆ ಕಟ್ಟಿಹಾಕಿದ್ದ ಜೋಡೆತ್ತು ನಾಪತ್ತೆ : ಇನ್ನೊಂದೆಡೆ, ಮನೆ ಮುಂದೆ ಕಟ್ಟಿದ್ದ ಎತ್ತುಗಳನ್ನು ಕದ್ದೊಯ್ದಿರುವ ಘಟನೆ ಜಗಳೂರು ತಾಲೂಕಿನ ಕೆಳಗೋಟೆ ಗ್ರಾಮದಲ್ಲಿ (ನವೆಂಬರ್ 13-2019) ನಡೆದಿತ್ತು. ಅಬ್ದುಲ್ ರೆಹಮಾನ್ ಎಂಬ ರೈತನಿಗೆ ಸೇರಿದ ಸುಮಾರು 1 ಲಕ್ಷ ರೂ. ಬೆಲೆಬಾಳುವ ಎತ್ತುಗಳನ್ನು ಕದಿಯಲಾಗಿತ್ತು. ಇದರಿಂದ ಕಂಗಾಲಾಗಿ ಊರೆಲ್ಲ ಹುಡುಕಿದರೂ ಸಿಕ್ಕಿರಲಿಲ್ಲ. ಜಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ದೇವರ ಹೋರಿಗಳು ನಾಪತ್ತೆ: ದೇವರ ಹೆಸರಿನಲ್ಲಿ ಬಿಟ್ಟಿದ್ದ ಮೂರು ರಾಸುಗಳು ಕಾಣೆಯಾಗಿರುವ ಘಟನೆ ಶಿವಮೊಗ್ಗ ತಾಲೂಕಿನ ಅಬ್ಬಲಗೆರೆ ಗ್ರಾಮದಲ್ಲಿ (ಏಪ್ರಿಲ್ 30-2022) ನಡೆದಿತ್ತು. ಅಬ್ಬಲಗೆರೆ ಗ್ರಾಮದ ಉಜ್ಜೆನೇಶ್ವರ, ಮರುಳುಸಿದ್ದೇಶ್ವರ ಹಾಗೂ ಗ್ರಾಮದ ಚೌಡೇಶ್ವರಿ ದೇವಿಯ ಹೆಸರಿನಲ್ಲಿ ಎರಡು ಹೋರಿ ಹಾಗೂ ಒಂದು ಹಸುವನ್ನು ಬಿಡಲಾಗಿತ್ತು. ಈ ಮೂರು ರಾಸುಗಳು ಕಾಣೆಯಾಗಿದ್ದವು. ರಾಸುಗಳು ಕಾಣೆಯಾಗಿರುವುದಕ್ಕೆ ಗ್ರಾಮಸ್ಥರು ಕಣ್ಣೀರು ಹಾಕಿದ್ದರು. ಈ ಎಲ್ಲ ರಾಸುಗಳನ್ನು ಕಳೆದ ಮೂರು ವರ್ಷದ ಹಿಂದೆ ಹೊಸದಾಗಿ ತಂದು ದೇವರ ಹೆಸರಿನಲ್ಲಿ ಬಿಡಲಾಗಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದರು.
ಇದನ್ನೂ ಓದಿ: ಅಬ್ಬಲಗೆರೆಯ ದೇವರ ಹೋರಿಗಳು ನಾಪತ್ತೆ : ದನಗಳ್ಳರ ಮೇಲೆ ಗುಮಾನಿ