ಸುರಪುರ (ಯಾದಗಿರಿ): ನಗರದ ಗೋಲ್ಡನ್ ಕೇವ್ ಗವಿ ಬುದ್ಧ ವಿಹಾರದ ಬಳಿ ಭೂ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ ನಡೆಸಿತು.
ಸುರಪುರ ನಗರದಲ್ಲಿರುವ ಗೋಲ್ಡನ್ ಕೇವ್ ಗವಿ ಬುದ್ಧ ವಿಹಾರಕ್ಕೆ ಹೋಗುವ ರಸ್ತೆ ಬಳಿಯ ಗಾಂವಠಾಣಾ ಜಾಗವನ್ನು ಭೂಗಳ್ಳರು ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ. ಇದನ್ನು ವಿರೋಧಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಬಣದ ಮುಖಂಡರು ಪ್ರತಿಭಟನೆ ನಡೆಸಿದರು. ನಗರಸಭೆ ಮುಂದೆ ಜಮಾಯಿಸಿದ ಮುಖಂಡರು ಭೂ ಮಾಫಿಯಾ ವಿರುದ್ಧ ಘೋಷಣೆಗಳನ್ನು ಕೂಗಿ ಕೂಡಲೇ ನಡೆಯುತ್ತಿರುವ ಭೂ ದಂಧೆಯನ್ನು ತಡೆಯುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ, ಬುದ್ಧ ವಿಹಾರದ ಬಳಿಯಲ್ಲಿನ ಸರ್ವೇ ನಂಬರ್ 31 ಎಂದು ಹೇಳಿಕೊಂಡು ಗಾಂವಠಾಣಾ ಜಾಗವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ. ಅಕ್ರಮವಾಗಿ ಭೂಮಿ ಮಾರಾಟ ಮಾಡುತ್ತಿರುವವರಿಗೆ, ಬುದ್ಧವಿಹಾರ ಬಳಿಯಲ್ಲಿನ ಜಾಗಕ್ಕೆ ನಗರಸಭೆ ಅಧಿಕಾರಿಗಳು ಅಕ್ರಮವಾಗಿ ನಂಬರ್ ನೀಡುತ್ತಿದ್ದು, ಇದರಿಂದ ಗಲಾಟೆಗಳಾದರೆ ಅದಕ್ಕೆ ನಗರಸಭೆಯ ಅಧಿಕಾರಿಗಳನ್ನೇ ನೇರ ಹೊಣೆಯಾಗಿಸಿ ಅಧಿಕಾರಿಗಳ ಮೇಲೆ ಅಟ್ರಾಸಿಟಿ ಮತ್ತು 420 ಕೇಸ್ ದಾಖಲಿಸಬೇಕಾಗುವುದು ಎಂದು ಎಚ್ಚರಿಸಿದರು.