ಯಾದಗಿರಿ: ಒಂದು ತಿಂಗಳಲ್ಲಿ ಕಾಂಗ್ರೆಸ್ ಪಕ್ಷ ನುಚ್ಚುನೂರಾಗುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಂದು ಹೊಸ ಪಕ್ಷ ಕಟ್ಟಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭವಿಷ್ಯ ನುಡಿದಿದ್ದಾರೆ.
ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ನಡೆದ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಕಟೀಲ್, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ರಾಜೀನಾಮೆ ನೀಡಿ ಆರು ತಿಂಗಳು ಕಳೆದರೂ ಅಧ್ಯಕ್ಷ ಸ್ಥಾನಕ್ಕೆ ಯಾರೂ ಆಯ್ಕೆ ಆಗಿಲ್ಲ. ಕಾಂಗ್ರೆಸ್ ರಾಜ್ಯಾಧ್ಯಕ್ಷ ಆಯ್ಕೆ ವಿಚಾರವಾಗಿ ವೇಣುಗೋಪಾಲ್ ಸೇರಿದಂತೆ ಹಲವು ನಾಯಕರನ್ನು ಕಳಿಸಿದರು. ಅಲ್ಲದೇ ಸೋನಿಯಾ ಗಾಂಧಿ ಅವರನ್ನು ಭೇಟಿಯಾದರೂ ಕೂಡಾ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರ ಆಯ್ಕೆ ಸಮಸ್ಯೆ ಬಗೆಹರಿದಿಲ್ಲ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.
ಡಿಕೆಶಿ ಅವರನ್ನು ರಾಜ್ಯಾಧ್ಯಕ್ಷ ಮಾಡಿದ್ರೆ ಸಿದ್ದರಾಮಯ್ಯ ಪಕ್ಷ ಬಿಟ್ಟು ಹೊರ ಹೋಗ್ತಾರೆ. ಸಿದ್ದರಾಮಯ್ಯಗೆ ಅಧ್ಯಕ್ಷ ಮಾಡಿದ್ರೆ ಡಿಕೆಶಿ ಪಕ್ಷ ತೊರೆಯುತ್ತಾರೆ. ಇಬ್ಬರನ್ನ ಒಂದು ಮಾಡಿದ್ರೆ ಪರಮೇಶ್ವರ್ ಪಕ್ಷದಿಂದ ಹೊರ ಹೋಗ್ತಾರೆ. ಇನ್ನೊಂದು ತಿಂಗಳಲ್ಲಿ ಕಾಂಗ್ರೆಸ್ ನುಚ್ಚುನೂರಾಗಿ ತುಂಡಾಗುತ್ತದೆ. ನಂತರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಸ ಪಕ್ಷ ಕಟ್ಟಲಿದ್ದಾರೆ ಎಂದು ವ್ಯಂಗ್ಯವಾಡಿದ್ರು.
ರಾಜ್ಯಾಧ್ಯಕ್ಷ ಆಯ್ಕೆ ಮಾಡದ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ದೇಶದ ಸರ್ಕಾರವನ್ನು ನಡೆಸಲು ಸಾಧ್ಯವಿಲ್ಲ. ಹೀಗಾಗಿ ದೇಶದ ಸರ್ಕಾರ ನಡೆಸಲು ಪ್ರಧಾನಿ ನರೇಂದ್ರ ಮೋದಿ ಒಬ್ಬರಿಂದಲೇ ಸಾಧ್ಯ ಅನ್ನುವ ಮೂಲಕ ಕಾಂಗ್ರೆಸ್ ಪಕ್ಷದ ನಾಯಕರುಗಳ ವಿರುದ್ಧ ಮಾತಿನ ಸಮರ ನಡೆಸಿದರು.