ಗುರುಮಠಕಲ್: ಗ್ರಾಮ ಪಂಚಾಯಿತಿಗಳ ಹಂತದಲ್ಲಿ ಬಡವರಿಗೆ ಮೂಲ ಸೌಲಭ್ಯಗಳಾದ ಗಂಗಾಕಲ್ಯಾಣ ಯೋಜನೆಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡಲು ದಯಮಾಡಿ ಜನರಿಂದ ಹಣವನ್ನು ಪಡೆಯುವ ಕೆಲಸ ಮಾಡದಿರಿ ಎಂದು ಜೆಡಿಎಸ್ ಮುಖಂಡ ಶರಣಗೌಡ ಕಂದಕೂರ ನೂತನ ಗ್ರಾ.ಪಂ. ಅಧ್ಯಕ್ಷ ಮತ್ತು ಸದಸ್ಯರಿಗೆ ಕಿವಿಮಾತು ಹೇಳಿದ್ದಾರೆ.
ತಾಲೂಕಿನ ಕೊಂಕಲ್ ಗ್ರಾಮದಲ್ಲಿ ಆಯೋಜಿಸಿದ್ದ ಗ್ರಾಮ ಪಂಚಾಯಿತಿ ನೂತನ ಸರ್ವ ಸದಸ್ಯರ ಸನ್ಮಾನ ಹಾಗೂ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಈಗಾಗಲೇ ಗ್ರಾಮದ ಕರೆಮ್ಮ ದೇವಸ್ಥಾನದ ಹತ್ತಿರದ ರಸ್ತೆ, ಚರಂಡಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಗ್ರಾಮದ ವಿವಿದ ಬಡಾವಣೆಗಳಲ್ಲಿ ಸಿಸಿ ರಸ್ತೆ ಕಾಮಗಾರಿಗಳು ನಡೆದಿವೆ, ಜಲಜೀವನ ಮಿಷನ್ ಯೋಜನೆಯಡಿಯಲ್ಲಿನ 110 ಕೆವಿ ಸಾಮರ್ಥ್ಯ ಕೆಇಬಿ ಉಪಕೇಂದ್ರದ ಅಭಿವೃದ್ಧಿಗೆ 1 ಕೋಟಿ ರೂ.ಗಳ ಅನುದಾನ ಒದಗಿಸಲಾಗಿದೆ.
ಕುಮಾರಸ್ವಾಮಿ ಅಧಿಕಾರದಲ್ಲಿದ್ದರೆ ಇಡೀ ಗುರುಮಠಕಲ್ ಮತಕೇತ್ರ ಗುಡಿಸಲು ಮುಕ್ತವಾಗಿಸುವ ಕನಸು ಕಂಡಿದ್ದೆ. ಸರ್ಕಾರ ಉರುಳಿದ್ದರೂ ಸಹ ನನ್ನ ಶಕ್ತಿಮೀರಿ ನಿಮ್ಮ ಸೇವೆ ಮಾಡುತ್ತೇನೆ. ನನಗೆ ಬಿ.ಎಸ್.ಯಡಿಯೂರಪ್ಪ ಮೇಲೆ ವೈಯಕ್ತಿಕವಾದ ಯಾವ ದ್ವೇಷವೂ ಇಲ್ಲ, ದ್ವೇಷದ ರಾಜಕೀಯವನ್ನು ನಮ್ಮ ಕುಟುಂಬ ಯಾವತ್ತೂ ಮಾಡುವುದಿಲ್ಲ. ನಮ್ಮ ಅನುದಾನ ನೀಡಿದರೆ ಸಾಕು ಎಂದರು.