ಯಾದಗಿರಿ: ಚೇಳಿನ ಜಾತ್ರೆ ಎಂದೇ ಖ್ಯಾತಿಯಾಗಿರುವ ಗಿರಿನಾಡ ಕಂದಕೂರ ಗ್ರಾಮದ ಬೆಟ್ಟದಲ್ಲಿರುವ ಕೊಂಡಮ್ಮದೇವಿ ಜಾತ್ರೆಯು ಕೊರೊನಾ ಕಾರಣದಿಂದಾಗಿ ಈ ಬಾರಿ ರದ್ಧಾಗಿದೆ.
ಯಾದಗಿರಿ ಜಿಲ್ಲೆ ಗುರುಮಠಕಲ್ ತಾಲೂಕಿನ ಕಂದಕೂರ ಗ್ರಾಮದ ಬೆಟ್ಟದಲ್ಲಿರುವ ಸುಪ್ರಸಿದ್ಧ ಕೊಂಡಮ್ಮದೇವಿ ಮಂದಿರದ ಜಾತ್ರೆಯು ನಾಗರಪಂಚಮಿ ದಿನ ಪ್ರತೀ ವರ್ಷ ಅದ್ದೂರಿಯಾಗಿ ನಡೆಯುತ್ತಿತ್ತು. ಜಾತ್ರೆಯಲ್ಲಿ ಭಕ್ತರು ಮೈಮೇಲೆ ಚೇಳು ಹಾಕಿಕೊಂಡು ಖುಷಿಯಿಂದ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಈ ಕ್ಷೇತ್ರಕ್ಕೆ ಕೊಂಡಮ್ಮ ದೇವಿ ಕೃಪೆ ಇರುವುದರಿಂದ ಚೇಳು ಕಚ್ಚುವುದಿಲ್ಲ ಎನ್ನುವುದು ಇಲ್ಲಿಯ ಭಕ್ತರ ನಂಬಿಕೆ. ಹೀಗಾಗಿ ಈ ವಿಶಿಷ್ಠ ಜಾತ್ರೆಯನ್ನ ನೋಡುವುದಕ್ಕೆ ಯಾದಗಿರಿ ಸೇರಿ ಸುತ್ತಲ ಜಿಲ್ಲೆಯ ಜನರು ಪ್ರತಿ ವರ್ಷ ಆಗಮಿಸುತ್ತಿದ್ದರು. ಆದರೆ, ಈ ಬಾರಿ ಜಿಲ್ಲೆಯಲ್ಲಿ ಕೊರೊನಾ ತಾಂಡವವಾಡಿದ್ದು, ಈ ವಿಶಿಷ್ಟ ಜಾತ್ರೆಯ ಆಚರಣೆಗೆ ಬ್ರೇಕ್ ಬಿದ್ದಿದೆ.
ಕಂದಕೂರ ಗ್ರಾಮದಲ್ಲಿ ನಿನ್ನೆ ಡಂಗೂರ ಸಾರಿಸುವ ಮೂಲಕ ಇಂದು ಜಾತ್ರೆ ನಡೆಸದಂತೆ ಜಿಲ್ಲಾಡಳಿತ ಮನವಿ ಮಾಡಿತ್ತು. ಅದಲ್ಲದೆ, ಭಕ್ತರು ಜಾತ್ರೆಗೆ ಬರದಂತೆ ಕೊಂಡಮಯಿ ಅರ್ಚಕರು ಸಹ ಮನವಿ ಮಾಡಿಕೊಂಡಿದ್ದರು.