ಗುರುಮಠಕಲ್ (ಯಾದಗಿರಿ): ಗ್ರೀನ್ ಝೋನ್ ಯಾದಗಿರಿ ಜಿಲ್ಲೆಯ ಗುರುಮಠಕಲ್ನಲ್ಲಿ ಲಾಕ್ಡೌನ್ ಸಡಿಲಿಕೆ ಮಾಡಿರುವ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಎಲ್ಲ ರೀತಿಯ ಅಂಗಡಿಗಳು ಓಪನ್ ಆಗಿದ್ದು, ಎಂದಿನಂತೆ ವ್ಯಾಪಾರ ವಹಿವಾಟು ನಡೆಸಲಾಗುತ್ತಿದೆ.
ಲಾಕ್ಡೌನ್ ಹಿನ್ನೆಲೆ ಮನೆಯಲ್ಲಿದ್ದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಗುರುಮಠಕಲ್ ನಗರಕ್ಕೆ ಆಗಮಿಸುತ್ತಿದ್ದಾರೆ. ಬಟ್ಟೆ ಅಂಗಡಿ, ಮೊಬೈಲ್ ಅಂಗಡಿ, ಸ್ಟೀಲ್ ರಾಡ್ ಅಂಗಡಿ, ಸಿಮೆಂಟ್ ಅಂಗಡಿ, ಮದ್ಯದಂಗಡಿ ಮೊದಲಾದ ಎಲ್ಲ ರೀತಿಯ ಅಂಗಡಿಗಳು ಓಪನ್ ಆಗಿವೆ. ದೂರ-ದೂರದ ಹಳ್ಳಿಯಿಂದ ಬೈಕ್, ಆಟೋ, ಟ್ರ್ಯಾಕ್ಟರ್ ಹಾಗೂ ಕಾರ್ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಂಚಾರ ಮಾಡುತ್ತಿದ್ದಾರೆ.
ಯಾದಗಿರಿ ಜಿಲ್ಲೆಯ ಗುರುಮಠಕಲ್ ಪಟ್ಟಣದಲ್ಲಿ ಅಂಗಡಿಗಳು ಪ್ರಾರಂಭವಾಗಿವೆ. ಆದರೆ, ಗುರುಮಠಕಲ್ ತಾಲೂಕಿನ ಗಡಿ ಭಾಗಕ್ಕೆ ಹೊಂದಿಕೊಂಡಿರುವ ತೆಲಂಗಾಣ ರಾಜ್ಯದ ಕೆಲ ಗ್ರಾಮಗಳ ಜನರು ತಂಡೋಪತಂಡವಾಗಿ ಮಾರುಕಟ್ಟೆಗೆ ಅಗಮಿಸಿ ಖರೀದಿಸುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಯಾದಗಿರಿ ಜಿಲ್ಲೆಯ ಗುರುಮಠಕಲ್ ಪಟ್ಟಣದಿಂದ ಕೇವಲ 10 ಕಿ.ಮೀ ಅಂತರದಲ್ಲಿ ತೆಲಂಗಾಣ ರಾಜ್ಯದ ಗ್ರಾಮಗಳಿವೆ. ಗಡಿಭಾಗದಲ್ಲಿ ಲಾಕ್ ಡೌನ್ ಸಡಿಲಿಕೆ ಹಿನ್ನೆಲೆ ಅಂಗಡಿಗಳು ತೆರೆಯುತ್ತವೆ ಎಂದು ಸುದ್ದಿ ತಿಳಿದು ತೆಲಂಗಾಣದ ಗ್ರಾಮಸ್ಥರು ಆಗಮಿಸುತ್ತಿದ್ದಾರೆ.
ತೆಲಂಗಾಣದ ತಾಂಡೂರ್, ಕೊಡಂಗಲ್, ವಿಕರಾಬಾದ್, ಕೊಸ್ಗಿ, ಕೊಡಂಗಲ್, ಬೊಮ್ರಾಸ್ಪೆಟ್, ಮದ್ದೂರು, ಕಾನರ್ಕುತ್ತಿ, ದಾಮರಗಿದ್ದ, ದೌಲತಾಬಾದ್, ನಾರಾಯಣಪೇಟ್ಗಳಲ್ಲಿ ದೆಹಲಿಯ ತಬ್ಲಿಘಿ ನಿಜಾಮುದ್ದೀನ್ ಮರ್ಕಸ್ಗೆ ತೆರಳಿದ ಯುವಕರಿಂದ ಈ ಭಾಗದಲ್ಲಿ ಕೊರೊನಾ ವೈರಸ್ ಹೆಚ್ಚುತ್ತಿದೆ.
ಇದೀಗ ಅದೇ ಭಾಗಗಳಿಂದ ಜನ ಆಗಮಿಸುತ್ತಿದ್ದು, ಕೊರೊನಾ ವೈರಸ್ ಲೆಕ್ಕಿಸದೇ ಜನ ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ, ಮಾಸ್ಕ್ ಕೂಡಾ ಧರಿಸದೇ ಅಂಗಡಿಗಳಿಗೆ ತೆರಳಿ ಖರೀದಿ ಮಾಡುತ್ತಿದ್ದಾರೆ. ಗ್ರೀನ್ ಝೋನ್ ಯಾದಗಿರಿ ಜಿಲ್ಲೆಯಲ್ಲಿ ಗುರುಮಠಕಲ್ ಪಟ್ಟಣದ ಜನರು ನಿರ್ಲಕ್ಷ್ಯ ವಹಿಸಿದ್ದು, ಜನರು ಸರ್ಕಾರದ ಆದೇಶಕ್ಕೆ ಕ್ಯಾರೆ ಎನ್ನುತ್ತಿಲ್ಲ.