ಯಾದಗಿರಿ : ಸರ್ಕಾರದ ಆದೇಶದಂತೆ ಪ್ರತಿ ಭಾನುವಾರ ಅಗಸ್ಟ್ 2ರವರೆಗೆ ರಾಜ್ಯಾದ್ಯಂತ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಆದರೆ, ಜಿಲ್ಲೆಯಲ್ಲಿ ಮಾತ್ರ ಮೊದಲ ವಾರವೇ ಲಾಕ್ಡೌನ್ಗೆ ಜನ ಡೋಂಟ್ ಕೇರ್ ಎನ್ನುವ ಮೂಲಕ ಸರ್ಕಾರದ ಆದೇಶ ಉಲ್ಲಂಘಿಸಿದ್ದಾರೆ.
ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಹೊರಡಿಸಿದ ಆದೇಶಕ್ಕೆ ಜಿಲ್ಲೆಯ ಜನ ಸೊಪ್ಪು ಹಾಕಿಲ್ಲ. ನಗರದ ಪ್ರಮುಖ ರಸ್ತೆಗಳಲ್ಲಿ ಸಾಮಾಜಿಕ ಅಂತರ ಮರೆತು, ಮಾಸ್ಕ್ ಧರಿಸದೆ ಅನಾವಶ್ಯಕವಾಗಿ ತಿರುಗಾಡುತ್ತಿದ್ದಾರೆ. ಲಾಕ್‌ಡೌನ್ ಇದ್ದರೂ ನಗರದ ಸುಭಾಷ್ ವೃತ್ತ ಸೇರಿ ಹಲವು ಪ್ರಮುಖ ರಸ್ತೆಗಳಲ್ಲಿ ಹೂವಿನ ವ್ಯಾಪಾರ, ಹಣ್ಣಿನ ವ್ಯಾಪಾರ ಜೋರಾಗಿ ಸಾಗುತ್ತಿದೆ. ವಾಹನ ಸಂಚಾರ ಕೂಡ ಎಂದಿನಂತೆ ಸಾಗಿದೆ. ಪೊಲೀಸರು ಕೂಡ ಹೆಚ್ಚು ತಲೆ ಕೆಡಿಸಿಕೊಳ್ಳದೆ ಲಾಕ್‌ಡೌನ್ ಉಲ್ಲಂಘಿಸಿದವರ ವಿರುದ್ಧ ಕ್ರಮಕ್ಕೆ ಮುಂದಾಗುತ್ತಿಲ್ಲ.
ಈಗಾಗಲೇ ಜಿಲ್ಲಾಡಳಿತ ಸಾರಿಗೆ ಬಸ್ ಸಂಚಾರ ಸ್ಥಗಿತಗೊಳಿದೆ. ಅಗತ್ಯ ವಸ್ತುಗಳ ಹೊರತು ಎಲ್ಲಾ ವಹಿವಾಟುಗಳನ್ನ ಬಂದ್ ಮಾಡಿದೆ. ಸಾರ್ವಜನಿಕರು ಅನಾವಶ್ಯಕವಾಗಿ ರಸ್ತೆಗಳಲ್ಲಿ ಸಂಚರಿಸಬಾರದು ಎಂಬ ಆದೇಶ ಹೊರಡಿಸಿದೆ. ಆದರೆ, ಜನರು ಮಾತ್ರ ಯಾವ ಆದೇಶಕ್ಕೂ ತಲೆಕೆಡಿಸಿಕೊಂಡಂತೆ ಕಂಡಿಲ್ಲ.