ಯಾದಗಿರಿ : ಮಧ್ಯ ರಾತ್ರಿಯಿಂದ ಬೆಳಗಿನ ಜಾವದ ತನಕ ಯಾದಗಿರಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ವಿದ್ಯುತ್ ಕಟ್ ಆಗಿ ಸೋಂಕಿತರು ನರಕಯಾತನೆ ಅನುಭವಿಸಿದ ಘಟನೆ ನಡೆದಿದೆ.
ಯಾದಗಿರಿ ತಾಲೂಕಿನ ಮುದ್ನಾಳ್ ಬಳಿ ಇರುವ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಮಧ್ಯರಾತ್ರಿಯಿಂದ ಬೆಳಗಿನ ಜಾವದ ತನಕ ವಿದ್ಯುತ್ ಇರದ ಪರಿಣಾಮ, ಆಕ್ಸಿಜನ್, ವೆಂಟಿಲೇಟರ್ ಬಂದ್ ಆಗಿ ಸೋಂಕಿತರು ಸರಿಯಾಗಿ ಉಸಿರಾಡಲು ಪರದಾಟ ನಡೆಸಿದ್ದಾರೆ.
ನಿನ್ನೆ ರಾತ್ರಿ ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗಿತ್ತು. ಹೀಗಾಗಿ, ವಿದ್ಯುತ್ ತಂತಿಗಳು ಕಟ್ ಆಗಿರುವ ಪರಿಣಾಮ ಆಸ್ಪತ್ರೆಗೆ ವಿದ್ಯುತ್ ಸರಬರಾಜು ಬಂದ್ ಆಗಿತ್ತು.
ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಕರೆಂಟ್ ಹೋದ್ರೆ ಜನರೇಟರ್ ವ್ಯವಸ್ಥೆ ಇದೆ. ಆದ್ರೆ, ಅದಕ್ಕೆ ಡೀಸೆಲ್ ಇಲ್ಲದ ಕಾರಣ ಸೋಂಕಿತರಿಗೆ ಸರಿಯಾದ ಆಕ್ಸಿಜನ್ ಪೂರೈಕೆಯಾಗಿಲ್ಲ.
ಕೈಯಲ್ಲಿ ಟವೆಲ್ ಹಿಡಿದು ಸೋಂಕಿತರಿಗೆ ಗಾಳಿ ಬೀಸಿದ ಘಟನೆ ನಡೆಯಿತು. ಜಿಲ್ಲಾಡಳಿತದ ಈ ಎಡವಟ್ಟು ಸೋಂಕಿತರು, ಸಂಬಂಧಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಕೊರೊನಾ ಸೋಂಕಿತರ ಹೆಚ್ಚಳ: ಕಾರವಾರ ಸೇರಿ 3 ನೌಕಾನೆಲೆ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಬೆಡ್ ವ್ಯವ್ಯಸ್ಥೆ
ಕರೆಂಟ್ ಹೋದ ಸಮಯದಲ್ಲಿ ಇಬ್ಬರು ಸೋಂಕಿತರು ಮೃತಪಟ್ಟಿದ್ದಾರೆ. ವಿದ್ಯುತ್ ಇಲ್ಲದ ಪರಿಣಾಮ ಈ ಇಬ್ಬರು ಪ್ರಾಣ ಬಿಟ್ಟಿರುವುದಾಗಿ ಮನೆಯವರು ಆರೋಪ ಮಾಡುತ್ತಿದ್ದಾರೆ. ಆದರೆ, ಅಧಿಕಾರಿಗಳು ಮಾತ್ರ ಈ ಆರೋಪ ತಳ್ಳಿ ಹಾಕುತ್ತಿದ್ದಾರೆ.
ಸ್ಥಳಕ್ಕೆ ದೌಡಾಯಿಸಿದ ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ ಪರಿಶೀಲನೆ ನಡೆಸಿದ್ದಾರೆ.