ಸುರಪುರ: ನಗರದ ಕುಂಬಾರಪೇಟೆಯಿಂದ ಮುದನೂರುವರೆಗೆ ತಲುಪುವ ಸುಮಾರು 30 ಕಿಲೋ ಮೀಟರ್ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಮೊಣಕಾಲೆತ್ತರದ ತಗ್ಗುಗಳಿಂದ ಕೂಡಿದ್ದು, ಜನರು ಈ ರಸ್ತೆಯಲ್ಲಿ ಪ್ರಯಾಣಿಸಲು ಪ್ರಸವವೇದನೆ ಅನುಭವಿಸುತ್ತಿದ್ದಾರೆ.
30 ಕಿ.ಮೀಟರ್ ರಸ್ತೆ ಪ್ರಯಾಣಕ್ಕೆ ಸುಮಾರು ಎರಡು ಗಂಟೆಗಳಿಗೂ ಹೆಚ್ಚು ಸಮಯ ತಗುಲುತ್ತಿದ್ದು, ತಗ್ಗು ಗುಂಡಿಗಳಲ್ಲಿ ಬೈಕ್ ಸವಾರರು ಬಿದ್ದು ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆಗಳು ಕೂಡ ನಡೆದಿವೆ. ರಸ್ತೆ ಸುಧಾರಣೆ ಕುರಿತು ವಾಗಣಗೇರಾ, ತಳವಾರಗೇರಾ, ಅಮ್ಮಪೂರ್, ಕನ್ನಳ್ಳಿ ಗ್ರಾಮಗಳ ಜನತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಮತ್ತು ಸ್ಥಳೀಯ ಶಾಸಕರಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಈ ರಸ್ತೆಯ ಕುರಿತು ವಾಗಣಗೇರೆ ಗ್ರಾಮದ ಹನುಮಂತ ಅಸ್ಕಿ ಹಾಗೂ ಅಂಬ್ರಪ್ಪ ದೊರೆ ಮಾತನಾಡಿ, ರಸ್ತೆ ಸುಧಾರಣೆ ಇಲ್ಲದೇ ಸುಮಾರು 10 ವರ್ಷಗಳಾಯಿತು. ಇದುವರೆಗೂ ಕೂಡ ಸುಸಜ್ಜಿತ ರಸ್ತೆ ನಿರ್ಮಾಣ ಆಗುತ್ತಿಲ್ಲ. 3 ಅಥವಾ 4 ವರ್ಷಕ್ಕೊಮ್ಮೆ ಗುಂಡಿಗಳಿಗೆ ಒಂದಿಷ್ಟು ಮಣ್ಣನ್ನು ಹಾಕಿ ಬಿಲ್ ಎತ್ತುವುದನ್ನು ಬಿಟ್ಟರೆ ಜನರ ಅನುಕೂಲಕ್ಕಾಗಿ ರಸ್ತೆ ನಿರ್ಮಿಸಬೇಕೆಂಬ ಆಸಕ್ತಿಯನ್ನು ಯಾವ ಅಧಿಕಾರಿಗಳು, ಜನಪ್ರತಿನಿಧಿಗಳು ತೋರಿಸುತ್ತಿಲ್ಲ. ರಸ್ತೆಯಲ್ಲಿ ಗರ್ಭಿಣಿಯರು ಆಸ್ಪತ್ರೆಗೆ ಹೊರಟರೆ ದಾರಿ ಮಧ್ಯೆ ಹೆರಿಗೆಯಾಗುವ ಸಂಭವವಿದೆ. ಮುಂದೆ ರಸ್ತೆ ದುರಸ್ತಿ ಮಾಡದಿದ್ದರೆ ಈ ಭಾಗದ ಜನರೇ ಭಿಕ್ಷೆ ಬೇಡಿ ಬಂದ ಹಣದಲ್ಲಿ ರಸ್ತೆ ದುರಸ್ತಿ ಮಾಡಿಸುತ್ತೇವೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಸರ್ಕಾರ ಕೂಡಲೇ ಈ ರಸ್ತೆ ಸುಧಾರಣೆ ಮಾಡಬೇಕು. ಇಲ್ಲವಾದಲ್ಲಿ ಕುಂಬಾರಪೇಟೆಯಿಂದ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸುವುದಾಗಿ ಲೋಕೊಪಯೋಗಿ ಇಲಾಖೆಗೆ ಎಚ್ಚರಿಕೆ ನೀಡಿದ್ದಾರೆ.