ಯಾದಗಿರಿ: ವಿರೋಧ ಪಕ್ಷದ ನಾಯಕರಿಗೆ ಮೋದಿ ಸರ್ಕಾರದ ವಿರುದ್ಧ ಮಾತನಾಡಲು ಯಾವುದೇ ವಿಷಯವಿಲ್ಲ. ಹೀಗಾಗಿ ಸಿಎಂ ಬದಲಾವಣೆ ಬಗ್ಗೆ ಹೇಳಿಕೆ ನೀಡುತ್ತಾರೆಂದು ಸಚಿವ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ.
ಜನಸೇವಕ ಸಮಾವೇಶದಲ್ಲಿ ಪಾಲ್ಗೊಳ್ಳುವ ಮೊದಲು ಸಿಎಂ ಬದಲಾವಣೆಯಾಗಲಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿಎಂ ಬದಲಾವಣೆ ಇಲ್ಲವೆಂದು ಈಗಾಗಲೇ ಹೈಕಮಾಂಡ್ ಸ್ಪಷ್ಟಪಡಿಸಿದೆ. ವಿರೋಧ ಪಕ್ಷದ ನಾಯಕರಿಗೆ ಮೋದಿ ಸರ್ಕಾರದ ವಿರುದ್ಧ ಮಾತನಾಡಲು ಯಾವುದೇ ವಿಷಯವಿಲ್ಲ. ಹೀಗಾಗಿ ಸಿಎಂ ಬದಲಾವಣೆ ಬಗ್ಗೆ ಹೇಳಿಕೆ ನೀಡುತ್ತಾರೆ. ಸಿದ್ದರಾಮಯ್ಯ ಬಿಜೆಪಿ ವಕ್ತಾರರಾ? ಅಥವಾ ಬಿಜೆಪಿ ಹೈಕಮಾಂಡ್ ನಾಯಕರಾ?. ಅವರ ಹೇಳಿಕೆಯಿಂದ ಯಾವುದೂ ಸತ್ಯವಾಗುವುದಿಲ್ಲ. ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ. ಸಿಎಂ ಹುದ್ದೆ ಖಾಲಿಯಿಲ್ಲ ಎಂದರು.
ಇನ್ನು, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಬಿಎಸ್ವೈಗೆ ಪರಮಾಧಿಕಾರವಿದೆ. ಅವರು ಈಗಾಗಲೇ ದೆಹಲಿ ನಾಯಕರನ್ನು ಭೇಟಿ ಮಾಡಿ ಚರ್ಚಿಸಿದ್ದು, ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು. ಶಾಸಕ ಬಸನಗೌಡ ಪಾಟೀಲ ಯತ್ನಾಳ್ಗೆ ಸಚಿವ ಸ್ಥಾನ ನೀಡುವ ವಿಚಾರವಾಗಿ ಮಾತನಾಡಿ, ವೈಯಕ್ತಿಕವಾಗಿ ನಾನು ಏನೂ ಹೇಳಲ್ಲ. ಇದು ಸಿಎಂಗೆ ಬಿಟ್ಟ ವಿಚಾರ ಎಂದರು.