ಯಾದಗಿರಿ: ಜಿಲ್ಲೆಯಲ್ಲಿ ಸಚಿವ ಆರ್. ಅಶೋಕ್ ಗ್ರಾಮ ವಾಸ್ತವ್ಯ ಮಾಡುತ್ತಿದ್ದು, ಯಾದಗಿರಿ ತಾಲೂಕಿನ ದೇವತ್ಕಲ್ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಲಂಬಾಣಿ ನೃತ್ಯಕ್ಕೆ ಸಚಿವರು ಮತ್ತು ಶಾಸಕ ರಾಜೂಗೌಡ ಡ್ಯಾನ್ಸ್ ಮಾಡಿದ್ದಾರೆ.
ಲಂಬಾಣಿ ಜನಾಂಗದ ಕಲೆ-ಸಂಸ್ಕೃತಿ ಬಿಂಬಿಸುವ ನೃತ್ಯ ನೋಡುಗರನ್ನು ಹುಚ್ಚೆಬ್ಬಿಸಿ ಕುಣಿಯುವಂತೆ ಮಾಡಿತು. ಸೇವಲಾಲ ಕುರಿತ ಹಾಡಿಗೆ ಸಚಿವ ಆರ್. ಅಶೋಕ್, ಶಾಸಕ ರಾಜೂಗೌಡ ಹೆಜ್ಜೆ ಹಾಕಿದರು. ಒಂದೇ ವೇದಿಕೆಯಲ್ಲಿ ಮೂರು ಬಾರಿ ಈ ಹಾಡಿಗೆ ನೃತ್ಯ ಮಾಡಲಾಯಿತು. ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಅವರು ಕೂಡ ಕೆಲ ಕ್ಷಣ ಹೆಜ್ಜೆ ಹಾಕಿದರು.
ಇದೇ ವೇಳೆ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ್, ಬಾಲ್ಯ ಎನ್ನುವುದು ಎಷ್ಟು ಸುಂದರ. ಗ್ರಾಮವಾಸ್ತವ್ಯದ ಅಂಗವಾಗಿ ಪ್ರಾಥಮಿಕ ಶಾಲಾ ಮಕ್ಕಳ ಲಂಬಾಣಿ ನೃತ್ಯದ ವೈವಿಧ್ಯತೆ ನೋಡುತ್ತಾ, ನಾನು ಮಗುವಾದೆ ಎಂದರು.
ನಂತರ 60 ಲಕ್ಷ ರೂಪಾಯಿ ವೆಚ್ಚದ ಸುರಪುರ ತಾಲೂಕಿನ ಕಕ್ಕೇರಾ ಪಟ್ಟಣ ಹಾಗೂ ಕೊಡೇಕಲ್ ಗ್ರಾಮದಲ್ಲಿ ಅಟಲ್‌ಜಿ ಜನಸ್ನೇಹಿ ಕೇಂದ್ರ (ನಾಡ ಕಚೇರಿ) ನಿರ್ಮಾಣ ಕಾಮಗಾರಿಗೆ ಸಚಿವರು ಅಡಿಗಲ್ಲು ಹಾಕಿದರು.
ಇದನ್ನೂ ಓದಿ: ಪಾವಗಡ ಬಸ್ ದುರಂತ.. ಮೃತ ಸಹೋದರಿಯರಿಬ್ಬರ ಅಂತ್ಯಕ್ರಿಯೆಯಲ್ಲಿ ಮುಗಿಲುಮುಟ್ಟಿತು ಆಕ್ರಂದನ
ಭಾನುವಾರ ಬೆಳಗ್ಗೆ ಸಚಿವರಾದ ಆರ್ ಅಶೋಕ್, ಶಾಸಕ ರಾಜೂಗೌಡ, ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ, ಸಹಾಯಕ ಆಯುಕ್ತ ಶಾ ಆಲಂ ಹುಸೇನ್ ಸೇರಿದಂತೆ ದೇವತ್ಕಲ್ ನಲ್ಲಿ ಶ್ರೀ ಸಿದ್ಧ ಬೀರಲಿಂಗೇಶ್ವರ ದೇವಸ್ಥಾನ ಬಬಲಾದಿ ದೇವರ ದರ್ಶನ ಪಡೆದರು. ದೇವತ್ಕಲ್ನಲ್ಲಿ ಪರಿಶಿಷ್ಟ ಜಾತಿಯ ಪರಮಣ್ಣ ಎಂಬುವರ ಮನೆಯಲ್ಲಿ ಕಂದಾಯ ಸಚಿವ ಆರ್. ಅಶೋಕ್ ಭೋಜನ ಸೇವಿಸಿದರು.