ಗುರುಮಠಕಲ್ : ಇಲ್ಲಿರುವ ಶಾಸಕರ ಜನಸಂಪರ್ಕ ಕಚೇರಿ ಮುಚ್ಚಿ ಎಂದು ಜಿಪಂ ಸಿಇಒ ಅವರಿಗೆ ದೂರು ನೀಡಿದ್ದಾರೆ. ನಾವು ಶಾಸಕರ ಕಚೇರಿಯಲ್ಲಿ ಕಾಲಹರಣ ಮಾಡಲು ಕೂಡುತ್ತಿಲ್ಲ. ಕ್ಷೇತ್ರದ ಜನರ ಸಮಸ್ಯೆ ಪರಿಹರಿಸಲು ಕೆಲಸ ಮಾಡುತ್ತೇವೆ. ಕಚೇರಿ ಮುಚ್ಚಿ ಎಂದು ಹೇಳಲು ನೀವು ಯಾರು ಎಂದು ಜೆಡಿಎಸ್ ರಾಜ್ಯ ಯುವ ನಾಯಕ ಶರಣಗೌಡ ಕಂದಕೂರ ಖಾರವಾಗಿ ಪ್ರಶ್ನಿಸಿದರು.
ತಾಲೂಕಿನ ಮಾಧ್ವಾರ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಿಜೆಪಿ ಬೆಂಬಲಿತ ಗ್ರಾಪಂ ಸದಸ್ಯರು ಮತ್ತು ಕಾರ್ಯಕರ್ತರು ಜೆಡಿಎಸ್‌ಗೆ ಸೇರ್ಪಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗುರುಮಠಕಲ್ ಮತಕ್ಷೇತ್ರದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ನಾನು ಹಗಲಿರುಳು ಶ್ರಮಿಸುತ್ತಿದ್ದು, ನನ್ನ ಬಗ್ಗೆ ಮತನಾಡುವ ವಿರೋಧಿಗಳು ತಾಕತ್ತಿದ್ದರೆ ಮುಂದಿನ ವಿಧಾನಸಭೆ ಚುನಾವಣೆಗೆ ಸಿದ್ಧರಾಗಿ ಎಂದು ಸವಾಲು ಹಾಕಿದರು.
ಸ್ಥಳೀಯ ಬಿಜೆಪಿ ನಾಯಕರಿಗೆ ಯೋಗ್ಯತೆ ಇದ್ದರೆ ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಕಡಿತಗೊಳಿಸಿದ್ದ ಅನುದಾನ ವಾಪಸ್ ತರುವ ಕೆಲಸ ಮಾಡಲಿಲ್ಲ. ರಾಜ್ಯ ಸರ್ಕಾರ 29 ಸಾವಿರ ಕೋಟಿ ಅನುದಾನ ಬಾಕಿ ಉಳಿಸಿಕೊಂಡಿದೆ. ಈ ಸರ್ಕಾರದಿಂದ ಇನ್ನೂ ಗ್ರಾಮೀಣ ಭಾಗದಲ್ಲಿ ಮನೆಗಳನ್ನು ಮಂಜೂರು ಮಾಡಲು ಸಾಧ್ಯವಾಗಿಲ್ಲ. ಸರ್ಕಾರದಿಂದ ಮನೆಗಳು ಬಂದಲ್ಲಿ ನಾನೇ ಸ್ವತಃ ಹಳ್ಳಿ, ಹಳ್ಳಿಗೆ ಬಂದು ನಿರ್ಗತಿಕರಿಗೆ ಸೂರು ಒದಗಿಸುವ ಕೆಲಸ ಮಾಡುತ್ತೇನೆ ಎಂದು ಗುಡುಗಿದರು.
ಶರಣುಗೌಡ ಕಂದಕೂರು ಹೇಳಿಕೆ ಖಂಡನೀಯ : ಜೆಡಿಎಸ್ ಯುವ ನಾಯಕ ಶರಣಗೌಡ ಕಂದಕೂರು ಮಾಧ್ವರ ಗ್ರಾಮದಲ್ಲಿ ಆಯೋಜಿಸಿದ ಖಾಸಗಿ ಕಾರ್ಯಕ್ರಮದಲ್ಲಿ ಬಿಜೆಪಿ ಕಾರ್ಯಕರ್ತರು ನಾಲಾಯಕ್ ಎಂಬ ಹೇಳಿಕೆಗೆ ಬಿಜೆಪಿ ಪಕ್ಷವು ಖಂಡಿಸಿದ್ದು, ಅವರ ಕ್ಷಮಾಪಣೆಗೆ ಆಗ್ರಹಿಸಿ, ಗುರುಮಠಕಲ್ ಅಭಿವೃದ್ದಿಯಲ್ಲಿ ಯಾರು ಎಷ್ಟು ಅನುದಾನ ತಂದಿದ್ದಾರೆ ಎಂಬುದಕ್ಕೆ ಬಹಿರಂಗ ಚರ್ಚೆಗೆ ಸಿದ್ಧ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕೆ.ದೇವದಾಸ್ ಸವಾಲು ಹಾಕಿದರು.
ಓದಿ: ಬೊಮ್ಮಾಯಿ ಸಂಪುಟದಲ್ಲಿ ಬಿಎಸ್ವೈ ಪುತ್ರನಿಗೆ ಸಿಗದ ಚಾನ್ಸ್: ವಿಜಯೇಂದ್ರ ವಿಷಯದಲ್ಲಿ ಹೈಕಮಾಂಡ್ ನಡೆ ಏನಿದೆ?
ಶರಣಗೌಡ ನೀವು ಇನ್ನು ಚಿಕ್ಕವರು, ನಾಲಿಗೆ ಬಿಗಿ ಹಿಡಿದು ಮಾತು ಆಡಬೇಕು. ಅಧಿಕಾರ ಇದೆ ಎಂಬ ಅಹಂನಲ್ಲಿ ಮದಬಂದಂತೆ ಮಾತನಾಡುತ್ತಿದ್ದಾರೆ. ನಿಮ್ಮ ಅಪ್ಪನ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದೀರಾ, ಯಾದಗಿರಿಯಲ್ಲಿರುವ ಶಾಸಕರ ಕಚೇರಿಯನ್ನ ಶಾಸಕರೇ ಬಳಸಿಕೊಳ್ಳಬೇಕು.
ಅಧಿಕಾರ ಶಾಶ್ವತ ಅಲ್ಲ. ಮುಂದಿನ ದಿನಗಳಲ್ಲಿ ಬಿಜೆಪಿ ಕಾರ್ಯಕರ್ತರ ಬಲ ಏನು ಎಂಬುದನ್ನು ತೋರಿಸುತ್ತೇವೆ. ನಮ್ಮ ಪಕ್ಷದ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಬಿಡಿ ಎಂದು ಎಚ್ಚರಿಸಿದರು.