ಯಾದಗಿರಿ : ಜಿಲ್ಲೆಯ ನಾರಾಯಣಪುರ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಕಾಲುವೆ ಮೂಲಕ ಬೆಳೆಗೆ ಪೂರ್ಣಾವಧಿವರೆಗೂ ನೀರು ಹರಿಸಬೇಕೆಂದು ರೈತರು ಬೇಡಿಕೆ ಇಟ್ಟಿದ್ದಾರೆ. ಈ ಕುರಿತು ಇಂದು ಆಲಮಟ್ಟಿಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ಮಹತ್ವದ ನೀರಾವರಿ ಸಲಹಾ ಸಮಿತಿಯಿಂದ ಸಭೆ ನಡೆಯಲಿದೆ.
ಉಪ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅಧ್ಯಕ್ಷತೆಯಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ನಡೆಯಲಿದ್ದು, ರಾಯಚೂರು, ಯಾದಗಿರಿ ಹಾಗೂ ವಿಜಯಪುರ ಜಿಲ್ಲೆಯ ಎಲ್ಲ ಶಾಸಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಜಲಾಶಯ ತುಂಬಿದ್ದರಿಂದ ಹಿಂಗಾರು ಬೆಳೆಗೆ ಸಂಪೂರ್ಣ ನೀರು ಹರಿಸಬೇಕು. ವಾರಬಂದಿ ನೀತಿಯನ್ನ ಕೈ ಬಿಟ್ಟು ಏ.30 ರವರೆಗೆ ನೀರು ಹರಿಸಬೇಕು ಎಂದು ಜಿಲ್ಲೆಯ ರೈತರು ಒತ್ತಾಯಿಸಿದ್ದಾರೆ.
ಈಗಾಗಲೇ ಮೂಂಗಾರು ಫಸಲು ತೆಗೆದುಕೊಂಡಿರುವ ರೈತರು, ಹಿಂಗಾರು ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ. ಶೇಂಗಾ, ಕಡ್ಲೆ, ಜೋಳ ಬಿತ್ತನೆ ಮಾಡಿದ್ದು, ನೀರಿನ ಲಭ್ಯತೆ ನೋಡಿ ಭತ್ತ ನಾಟಿ ಮಾಡಲು ಅನ್ನದಾತರು ಸಿದ್ಧತೆ ನಡೆಸುತ್ತಿದ್ದಾರೆ. ಈ ಭಾರಿ ಮಳೆ ಉತ್ತಮವಾಗಿದ್ದರಿಂದ ಜಲಾಶಯ, ಹಳ್ಳ, ಕೊಳ್ಳಗಳು ತುಂಬಿದ್ದು, ಉತ್ತಮ ಬೆಳೆ ಬೆಳೆಯುವ ನಿರೀಕ್ಷೆಯಲ್ಲಿದ್ದಾರೆ.
ಇನ್ನೂ ನಾಳೆ ನಡೆಯುವ ಸಭೆಯಲ್ಲಿ ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ ಭಾಗವಹಿಸಲಿದ್ದು, ಜಿಲ್ಲೆಯ ರೈತರ ಹಿಂಗಾರು ಬೆಳೆಗೆ ಸಂಪೂರ್ಣವಾಗಿ ಕಾಲುವೆಯಿಂದ ನೀರು ಹರಿಸುವ ಬಗ್ಗೆ ಭರವಸೆ ಕೊಟ್ಟಿದ್ದಾರೆ.