ಯಾದಗಿರಿ : ಮಹಾರಾಷ್ಟ್ರ ಸೇರಿ ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ನಾರಾಯಣಪುರ ಬಸವಸಾಗರ ಜಲಾಶಯಕ್ಕೆ ಒಳ ಹರಿವು ಹೆಚ್ಚಳವಾಗಿದ್ದು, ಈ ಹಿನ್ನೆಲೆಯಲ್ಲಿ ಜಲಾಶಯದಿಂದ ಹೆಚ್ಚಿನ ನೀರು ಬಿಡುಗಡೆಯಾಗುತ್ತಿದೆ. ಹಾಗಾಗಿ ಭೀಮಾ ನದಿಗೆ ಹೆಚ್ಚಿನ ನೀರು ಹರಿದುಬಂದಿದ್ದು, ಭೀಮಾನದಿ ತೀರದ ಕಂಗಳೇಶ್ವರ, ವೀರಾಂಜನೇಯ ದೇವಾಲಯ ಜಲಾವೃತವಾಗಿದೆ. ಇಲ್ಲಿನ ವೀರಾಂಜನೇಯ ದೇವರ ದರ್ಶನಕ್ಕೆ ಬರುವ ಭಕ್ತರು ಭೀಮಾ ನದಿ ದಡದಲ್ಲೇ ದೇವರಿಗೆ ಕೈ ಮುಗಿದು ಹಿಂತಿರುಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇಲ್ಲಿನ ಗುರುಸಣಗಿ ಬ್ರಿಡ್ಜ್ ಕಂ ಬ್ಯಾರೇಜ್ ನಿಂದ ಭೀಮಾನದಿಗೆ ಸುಮಾರು 17 ಸಾವಿರ ಕ್ಯೂಸೆಕ್ ನೀರು ಹರಿಬಿಡಲಾಗಿದ್ದು, ಭೀಮಾನದಿಗೆ ನೀರಿನ ಒಳವು ಹೆಚ್ಚಾಗಿದೆ. ಇನ್ನು ಹೆಚ್ಚಿನ ನೀರು ಬಿಡುಗಡೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
ನದಿಗೆ ಇಳಿಯದಂತೆ ಸೂಚನೆ : ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ನಾರಾಯಣಪುರ ಬಸವ ಸಾಗರಕ್ಕೆ ಹೆಚ್ಚಿನ ನೀರು ಹರಿಸಲಾಗುತ್ತಿದ್ದು, ಪರಿಣಾಮ ಜಲಾಶಯ ಈಗಾಗಲೇ ಬಹುತೇಕ ಭರ್ತಿಯಾಗಿದೆ. ಜಲಾಶಯದಿಂದ ಹೆಚ್ಚಿನ ನೀರನ್ನು ಕೃಷ್ಣಾ, ಭೀಮಾ ನದಿಗಳಿಗೆ ಹರಿಬಿಡಲಾಗುತ್ತಿದ್ದು ನದಿಪಾತ್ರದ ಜನರು, ರೈತರು, ಮೀನುಗಾರರು ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾ ಎಸ್ಪಿ ಡಾ. ವೇದಮೂರ್ತಿ ಸೂಚನೆ ನೀಡಿದ್ದಾರೆ.