ಸುರಪುರ (ಯಾದಗಿರಿ): ಸುರಪುರ ತಾಲೂಕಿನ ಲಕ್ಷ್ಮೀಪುರ ಗ್ರಾಮದ ಮರಡಿ ಮಲ್ಲಿಕಾರ್ಜುನ ದೇವಸ್ಥಾನದ ಸಮೀಪದಲ್ಲಿ ಬೀದರ್ ಬೆಂಗಳೂರು ರಾಜ್ಯ ಹೆದ್ದಾರಿ ಬಳಿ ಪರವಾನಗಿ ಇಲ್ಲದೇ ಅಕ್ರಮವಾಗಿ ಕುರಿಗಳ ಸಂತೆ ಆರಂಭಗೊಳಿಸಲಾಗಿದೆ ಎನ್ನಲಾಗಿದೆ.
ಪ್ರತಿ ಶುಕ್ರವಾರ ಪಕ್ಕದ ಶಹಾಪುರದಲ್ಲಿ ಕುರಿಗಳ ಸಂತೆ ನಡೆಸಲಾಗುತ್ತಿತ್ತು.ಕೊರೊನಾ ವೈರಸ್ ಕಾರಣದಿಂದ ಶಹಾಪುರದಲ್ಲಿ ಕುರಿಗಳ ಸಂತೆ ರದ್ದುಗೊಳಿಸಲಾಗಿತ್ತು. ಆದ್ದರಿಂದ ಲಕ್ಷ್ಮಿಪುರ ಬಳಿ ಅಕ್ರಮವಾಗಿ ಸಂತೆ ನಡೆಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಸಾವಿರಾರು ಕುರಿಗಳು, ಮಾರಾಟಗಾರರು ಮತ್ತು ಕೊಳ್ಳುವವರು ಸೇರಿದ್ದರಿಂದ ಜಾತ್ರೆಯಂತೆ ಭಾಸವಾಗುತ್ತಿದೆ. ಯಾರೂ ಕೂಡ ಮಾಸ್ಕ್ ಧರಿಸುವುದಾಗಲಿ, ಸಾಮಾಜಿಕ ಅಂತರ ಪಾಲನೆಯಾಗಲಿ ಮಾಡದೇ ಕೋವಿಡ್-19 ಭೀತಿಯೇ ಇಲ್ಲದಂತೆ ವರ್ತಿಸುತ್ತಿದ್ದಾರೆ.
ರಾಜ್ಯ ಹೆದ್ದಾರಿ ಮೇಲೆಯೇ ವಾಹನಗಳನ್ನು ನಿಲ್ಲಿಸಿರುವುದರಿಂದ ವಾಹನಗಳ ಓಡಾಟಕ್ಕೆ ತೊಂದರೆಯುಂಟಾಗಿದೆ. ಈಗಾಗಲೇ ಕೊರೊನಾ ಸೋಂಕು ಹೆಚ್ಚುತ್ತಿರುವ ಸಂದರ್ಭದಲ್ಲಿ ಹೀಗೆ ಅಕ್ರಮವಾಗಿ ಸಂತೆಗಳನ್ನು ನಡೆಸುವುದರಿಂದ ಕೊರೊನಾ ಮತ್ತಷ್ಟು ಹೊರಡುವ ಸಾಧ್ಯತೆ ಇದೆ. ಇದಕ್ಕೆ ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ಕೂಡಲೆ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.