ಸುರಪುರ : ನಗರದ ರಂಗಂಪೇಟೆಯ ಜೆಸ್ಕಾಂ ಕಚೇರಿ ಹಿಂಭಾಗದ ಕಸಾಯಿ ಖಾನೆಯಲ್ಲಿ ಅಕ್ರಮವಾಗಿ ನೂರಾರು ಗೋವುಗಳು ಮತ್ತು ಜಾನುವಾರುಗಳನ್ನು ಹತ್ಯೆಮಾಡಿ ಮಾಂಸ ಮಾರಾಟ ಮಾಡುತ್ತಿದ್ದ ಪ್ರಕರಣ ಬಯಲಿಗೆ ಬಂದಿದ್ದು, ಸ್ಥಳಕ್ಕೆ ಪೊಲೀಸರು ಬರುತ್ತಿದ್ದಂತೆ ಗ್ರಾಹಕರು ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಶನಿವಾರದಿಂದಲೂ ನಿರಂತರವಾಗಿ ಜಾನುವಾರುಗಳನ್ನು ಕತ್ತರಿಸಲಾಗಿದೆ. ಜಾನುವಾರುಗಳ ಮಾಂಸ ಖರೀದಿಗೆ ಜನರೂ ನೂರಾರು ಸಂಖ್ಯೆಯಲ್ಲಿ ಮುಗಿಬಿದ್ದಿದ್ದಾರೆ. ಇದರಿಂದ ಇಡೀ ಕಸಾಯಿಖಾನೆ ಏರಿಯಾ ಪೂರ್ತಿ ಜನ ಜಾತ್ರೆಯಂತಾಗಿದೆ. ಅಕ್ರಮವಾಗಿ ಜಾನುವಾರುಗಳ ಮಾಂಸ ಮಾರಾಟ ದಂಧೆ ನಡೆದ ಸುದ್ದಿ ತಿಳಿದು ಸ್ಥಳಕ್ಕೆ ಪೊಲೀಸರು ಆಗಮಿಸುತ್ತಿದ್ದಂತೆ ಜನರು ದಿಕ್ಕಾಪಾಲಾಗಿ ಓಡಿದ್ದಾರೆ.
ಕಸಾಯಿಖಾನೆ ನಡೆಯುತ್ತಿರುವ ಬಗ್ಗೆ ನಗರಸಭೆ ಪೌರಾಯುಕ್ತರನ್ನು ಕೇಳಿದರೆ, ಯಾವುದೇ ಕಸಾಯಿಖಾನೆ ನಡೆಸಲು ಪರವಾನಿಗೆ ನೀಡಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಕೆಲವರು ತಮ್ಮ ಮನೆಗಳಲ್ಲಿ ಮಾಂಸ ಮಾರಾಟದ ವ್ಯಾಪಾರಕ್ಕೆ ಪರವಾನಿಗೆ ಇದೆ. ಆದರೆ ಕಸಾಯಿಖಾನೆ ನಡೆಸಲು ಅನುಮತಿ ನೀಡಿಲ್ಲ ಎಂದು ಹೇಳುತ್ತಿದ್ದಾರೆ.
ಈ ಕುರಿತು ಮಾತನಾಡಿದ ರಾಮ ಸೇನಾ ತಾಲೂಕು ಘಟಕದ ಅಧ್ಯಕ್ಷ ಶರಣು ನಾಯಕ್, ಕಳೆದ ಕೆಲ ದಿನಗಳ ಹಿಂದೆ ತಾಲೂಕು ಆಡಳಿತಕ್ಕೆ ಅಕ್ರಮ ಗೋ ಹತ್ಯೆ ತಡೆಯುವಂತೆ ಮನವಿ ಮಾಡಲಾಗಿತ್ತು. ಸದ್ಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನೂರಾರು ಕರುಗಳು, ಹಸುಗಳು, ಜಾನುವಾರುಗಳ ಹತ್ಯೆ ನಡೆದಿದೆ. ಇದಕ್ಕೆ ಕೂಡಲೇ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಸುರಪುರ ಬಂದ್ ಮಾಡಿ ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.