ಸುರಪುರ (ಯಾದಗಿರಿ): ನಗರದ ಮಹಾತ್ಮ ಗಾಂಧಿ ವೃತ್ತದ ಬಳಿಯಲ್ಲಿರುವ ಕಲಬುರಗಿ ಜಿಲ್ಲಾ ಸಹಕಾರಿ ಬ್ಯಾಂಕ್‌ನ ಸುರಪುರ ತಾಲೂಕು ಶಾಖೆಯಲ್ಲಿ ಹಣ ಡ್ರಾ ಮಾಡಿಕೊಳ್ಳಲು ರೈತರು ಮುಗಿಬಿದ್ದ ಘಟನೆ ನಡೆದಿದೆ. ಬ್ಯಾಂಕ್ ಖಾತೆಗಳಿಗೆ ಸರ್ಕಾರ ಜಮಾ ಮಾಡಿದ ಹಣ ಪಡೆಯಲು ಮುಗಿಬಿದ್ದರು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ರೈತರು ಯಾವುದೇ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳದೆ, ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಬ್ಯಾಂಕ್ ಮುಂಭಾಗ ಸೇರಿದ್ದರು.
ಬೆಳಗ್ಗೆಯಿಂದ ಶಾಖೆ ಮುಂದೆ ನಿಂತ ರೈತರು ಮತ್ತು ಮಹಿಳೆಯರು ಬ್ಯಾಂಕ್‌ನಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದ್ದರಿಂದ ಕುಡಿಯುವ ನೀರು, ಶೌಚಾಲಯಗಳಿಗಾಗಿ ಪರದಾಡಿ ಹಿಡಿಶಾಪ ಹಾಕಿದ ಘಟನೆ ನಡೆಯಿತು. ರೈತರು ಬ್ಯಾಂಕಿನ ಅವ್ಯವಸ್ಥೆಗೆ ಬೇಸರ ವ್ಯಕ್ತಪಡಿಸಿದರು. ಪೊಲೀಸ್ ಸಿಬ್ಬಂದಿ ಇದ್ದರೂ ಜನರು ಅವರ ಎದುರಲ್ಲೇ ನೂಕಾಟ-ತಳ್ಳಾಟ ಮಾಡಿದ್ದರಿಂದ ಕೆಲವರು ಸಾಮಾಜಿಕ ಅಂತರವಿಲ್ಲದ್ದನ್ನು ಕಂಡು ಬೇಸರ ವ್ಯಕ್ತಪಡಿಸಿದರು.
ಅಲ್ಲದೆ ಶಾಖೆಗೆ ಬರುವ ಗ್ರಾಹಕರಿಗೆ ಕುಡಿಯುವ ನೀರು ಮತ್ತು ಶೌಚಾಲಯದ ವ್ಯವಸ್ಥೆ ಕಲ್ಪಿಸುವಂತೆ ಸಿಬ್ಬಂದಿ ಬಳಿ ಒತ್ತಾಯಿಸಿದರು.