ಯಾದಗಿರಿ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಹಾಮಳೆಯಿಂದಾಗಿ ಕೃಷ್ಣಾ ನದಿ ಪಾತ್ರದ ಜನರಿಗೆ ಪ್ರವಾಹ ಭೀತಿ ಎದುರಾಗಿದೆ.
ಕಳೆದ ವರ್ಷವಷ್ಟೇ ಪ್ರವಾಹದಿಂದ ತತ್ತರಿಸಿದ್ದ ಜಿಲ್ಲೆಯ ಜನರಿಗೆ ಮತ್ತೆ ಪ್ರವಾಹ ಭೀತಿಯಲ್ಲಿದ್ದಾರೆ. ಹುಣಸಗಿ ತಾಲೂಕಿನ ನಾರಾಯಣಪುರ ಗ್ರಾಮದ ಸಮೀಪವಿರುವ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 1.82 ಲಕ್ಷ ಕ್ಯೂಸೆಕ್ನಷ್ಟು ನೀರು ಬಿಡಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಆಲಮಟ್ಟಿ ಜಲಾಶಯದಿಂದ ಬಸವಸಾಗರ ಜಲಾಶಯಕ್ಕೆ 1.7 ಲಕ್ಷ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ. ಇದರಿಂದಾಗಿ ಬಸವಸಾಗರ ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು, 14 ಗೇಟ್ಗಳ ಮೂಲಕ ಕೃಷ್ಣಾ ನದಿಗೆ 1.82 ಲಕ್ಷ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ ಅಂತ ಕೆಬಿಜೆಎನ್ಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಸವಸಾಗರ ಜಲಾಶಯದಲ್ಲಿ ಒಳಹರಿವು ಹೆಚ್ಚಳವಾದ ಹಿನ್ನೆಲೆ, ನೀರಿನ ಪ್ರಮಾಣ ಅಧಿಕವಾದರೆ ಕೃಷ್ಣಾ ನದಿಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುವ ಸಾಧ್ಯತೆಗಳಿವೆ. ಸದ್ಯ ಬಸವಸಾಗರ ಜಲಾಶಯದ ಒಳಹರಿವು 1.82 ಲಕ್ಷ ಕ್ಯೂಸೆಕ್ ಇದ್ದು, 492.25 ಮೀಟರ್ ಗರಿಷ್ಠ ಸಾಮರ್ಥ್ಯ ಹೊಂದಿದೆ. 33.31 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ ಜಲಾಶಯದಲ್ಲಿ ಈಗಾಗಲೇ 28 ಟಿಎಂಸಿ ನೀರು ಸಂಗ್ರಹವಾಗಿದೆ. ಕೃಷ್ಣಾ ನದಿಗೆ ನೀರು ಹೆಚ್ಚಳವಾದ ಹಿನ್ನೆಲೆ, ಕಲಬುರಗಿ ಮತ್ತು ರಾಯಚೂರು ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಶಹಾಪುರ ತಾಲೂಕಿನ ಕೊಳ್ಳೂರು ಬಳಿಯ ಸೇತುವೆ ಮುಳುಗಡೆಯಾಗುವ ಹಂತಕ್ಕೆ ತಲುಪಿದ್ದು, ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.
ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಈಗಾಗಲೇ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಮೂಲಕ ನದಿ ಪಾತ್ರದ ಜನರಿಗೆ ತಮ್ಮ ಜಾನುವಾರುಗಳ ಸಮೇತ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿದೆ.