ಯಾದಗಿರಿ : ಭೀಮಾ ನದಿಯಲ್ಲಿ ಮತ್ತೆ ನೀರಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿರುವ ಕಾರಣ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರಲು ಯಾದಗಿರಿ ಜಿಲ್ಲಾಧಿಕಾರಿ ಡಾ. ರಾಗಪ್ರಿಯ ಆರ್ ಸೂಚಿಸಿದ್ದಾರೆ.
ಸೊನ್ನಾ ಬ್ಯಾರೇಜ್ನಿಂದ ಭೀಮಾ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಬಿಡುತ್ತಿರುವ ಹಿನ್ನೆಲೆ, ಸನ್ನತಿ ಬ್ಯಾರೇಜ್ ಭರ್ತಿಯಾಗಿದೆ. ಹೀಗಾಗಿ, ಬ್ಯಾರೇಜ್ನಿಂದ 3 ಲಕ್ಷ 68 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ನದಿಗೆ ಬಿಡಲಾಗುತ್ತಿದೆ. ಇದರಿಂದ ಭೀಮಾ ನದಿಯಲ್ಲಿನ ನೀರಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ. ಎರಡು ದಿನಗಳ ಕಾಲ ನದಿ ಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಧಿಕಾರಿ ರಾಗಪ್ರಿಯ ತಿಳಿಸಿದ್ದಾರೆ.
ಈಗಾಗಲೇ ಮುಂಜಾಗ್ರತಾ ಕ್ರಮವಾಗಿ ನದಿ ಪಾತ್ರದ 14 ಗ್ರಾಮಗಳ ಜನರನ್ನ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದ್ದು, 33 ಗ್ರಾಮಗಳ ಜನರಿಗೆ ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ. ಪ್ರವಾಹ ಪರಿಸ್ಥಿತಿ ಎದುರಿಸಲು ಸಿದ್ದರಾಗಿರುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ. ನದಿ ತೀರಕ್ಕೆ ಜನ, ಜಾನುವಾರು ತೆರಳದಂತೆ ಗ್ರಾಮ ಪಂಚಾಯತ್ನಿಂದ ಡಂಗುರ ಸಾರಿ ಸೂಚನೆ ನೀಡಲಾಗಿದೆ. ಸಾರ್ವಜನಿಕರು ಅಧಿಕಾರಿಗಳಿಗೆ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.