ಯಾದಗಿರಿ: ಸಾಲಬಾಧೆ ತಾಳದೆ ಕ್ರಿಮಿನಾಶಕ ಸೇವಿಸಿ ಯುವ ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಶಾರದಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಪರಶುರಾಮ ಗೋನಾಲ (22) ಆತ್ಮಹತ್ಯೆಗೆ ಶರಣಾಗಿರುವ ರೈತ.
ಶಾರದ ಹಳ್ಳಿಗ್ರಾಮದಲ್ಲಿ ಈತನ ತಂದೆ ಹೆಸರಲ್ಲಿ 4 ಎಕರೆ ಜಮೀನು ಹೊಂದಿದ್ದ. ಜತೆಗೆ ಕಳೆದ ನಾಲ್ಕೈದು ವರ್ಷದಿಂದ ಬೇರೆ 20 ಎಕರೆ ಜಮೀನು ಲೀಸ್ ಪಡೆದು ಹತ್ತಿ, ಭತ್ತ, ಮೆಣಸಿನಕಾಯಿ ಬೆಳೆಯುತ್ತಿದ್ದ. ಬೆಳೆ ಸರಿಯಾಗಿ ಬಾರದೆ ಮಾಡಿದ ಸಾಲ ತೀರಿಸಲಾಗದೆ ಕಂಗಾಲಾಗಿ ಜಮೀನಿನಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ತಂದೆ ದೇವಿಂದ್ರಪ್ಪನ ಹೆಸರಲ್ಲಿ ಎಸ್ಬಿಐ ಬ್ಯಾಂಕ್ನಲ್ಲಿ 1 ಲಕ್ಷ ರೂ. ಹಾಗು ವ್ಯವಸಾಯ ಸಹಕಾರ ಸಂಘದಲ್ಲಿ 20 ಸಾವಿರ ರೂ., ಬೀಜ, ಗೊಬ್ಬರ ಮತ್ತು ಕ್ರಿಮಿನಾಶಕ ಖರೀದಿಗಾಗಿ ಹತ್ತು ಲಕ್ಷ ರೂ. ಕೈ ಸಾಲ ಪಡೆದಿದ್ದ ಎನ್ನಲಾಗ್ತಿದೆ.
ಸದ್ಯ ಶವವನ್ನು ಮರಣೋತ್ತರ ಪರೀಕ್ಷೆಗೆ ಶಹಾಪುರ ನಗರದ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಲಾಗಿದೆ. ಈ ಕುರಿತು ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.