ಯಾದಗಿರಿ: ನನ್ನ ಮತಕ್ಷೇತ್ರದ ನೂತನ ತಾಲೂಕು ಕೇಂದ್ರವಾಗಿರುವ ವಡಗೇರಾ ಪಟ್ಟಣ ಸೇರಿದಂತೆ ಗ್ರಾಮಿಣ ಭಾಗಗಳ ಅಭಿವೃದ್ಧಿಗೆ ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ವೆಂಕಟರೆಡ್ಡಿ ಮುದ್ನಾಳ ಹೇಳಿದರು.
ನಗರದ ಎನ್ವಿಎಂ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಡಗೇರಾ ಪಟ್ಟಣದಲ್ಲಿ ಮೊದಲು ಮಿನಿ ವಿಧಾನಸೌದ ಕಟ್ಟಡ ನಿರ್ಮಾಣ ಮಾಡಬೇಕು. ಅಂದಾಗ ಮಾತ್ರ ಸರ್ಕಾರದ ಎಲ್ಲಾ ಕಚೇರಿಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತವೆ. ಇದರಿಂದ ಎಲ್ಲರಿಗೂ ಅನುಕೂಲವಾಗಲಿದೆ. ಕಂದಾಯ ಸಚಿವ ಆರ್.ಅಶೋಕ್ ಅವರನ್ನು ಭೇಟಿಯಾಗಿ ಮನವಿ ಪತ್ರ ಕೂಡ ಸಲ್ಲಿಸಿ ಚರ್ಚಿಸಿದ್ದೇನೆ ಎಂದರು.
ವಡಗೇರಾ ಪಟ್ಟಣದಲ್ಲಿ ಗ್ರಾಮ ಪಂಚಾಯತ್ ಅಸ್ತಿತ್ವದಲ್ಲಿದೆ. ಅದನ್ನು ಪಟ್ಟಣ ಪಂಚಾಯತ್ಗೆ ಮೇಲ್ದರ್ಜೆಗೆ ಏರಿಸಬೇಕೆಂದು ನಾನು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಅವರನ್ನು ಭೇಟಿಯಾಗಿ ಚರ್ಚಿಸಿದ್ದೇನೆ. ಅವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈಗಾಗಲೇ ಮುಖ್ಯಮಂತ್ರಿಗಳು ಸಚಿವ ಸಂಪುಟ ಸಭೆಯಲ್ಲಿ ಯಾದಗಿರಿಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜ್ ಕಟ್ಟಡ ನಿರ್ಮಾಣ ಕಾಮಗಾರಿಗೆ ಮಂಜೂರಾತಿ ನೀಡಿ ಸೂಕ್ತ ಅನುದಾನ ಬಿಡುಗಡೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ. ಶೀಘ್ರವೇ ಅಡಿಗಲ್ಲು ಸಮಾರಂಭ ನಿಗದಿಪಡಿಸಲಾಗುವುದು. ಜೊತೆಗೆ ಜಿಲ್ಲಾ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಲಾಗುವುದು. ಇದರಿಂದ ಅಭಿವೃದ್ಧಿಗೆ ವೇಗ ಸಿಗಲಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ನಗರಕ್ಕೆ ಹೊಂದಿಕೊಂಡಿರುವ ರೈಲ್ವೆ ಮೇಲ್ಸೇತುವೆ ಶಿಥಿಲಗೊಂಡಿದ್ದು, ಕೂಡಲೇ ಕಾಮಗಾರಿ ಕೈಗೊಂಡು ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುದು. ಪ್ರವಾಹದಿಂದ ಬೆಳೆ ಹಾನಿಯಾದ ರೈತರಿಗೆ ಪರಿಹಾರ ಒದಗಿಸಿ ಕೊಡಲಾಗುವುದು. ಠಾಣಗುಂದಿ ಬಳಿ ಭೀಮಾ ನದಿಗೆ ಹಾಗೂ ವಡಿಗೇರಾ ತಾಲೂಕಿನ ಚನ್ನೂರ(ಜೇ)ಹತ್ತಿರ ಹರಿಯುವ ಕೃಷ್ಣಾ ನದಿಗೆ ದೊಡ್ಡ ಬ್ರಿಡ್ಜ್ ಕಂ ಬ್ಯಾರೇಜ್ಗಳ ನಿರ್ಮಾಣಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಕಾಮಗಾರಿ ಅನುಷ್ಠಾನಗೊಂಡರೆ ಹಲವಾರು ಗ್ರಾಮಗಳ ಜನರ ಕುಡಿಯುವ ನೀರಿನ ಸಮಸ್ಯೆ ದೂರವಾಗುವ ಜೊತೆಗೆ ಅವರ ಜಮೀನನ್ನು ನೀರಾವರಿ ಕ್ಷೇತ್ರವನ್ನಾಗಿ ಮಾಡಿಕೊಳ್ಳಲು ಸಹಾಯಕವಾಗುತ್ತದೆ ಎಂದು ತಿಳಿಸಿದರು.