ಯಾದಗಿರಿ: ನಗರಸಭೆಯಲ್ಲಿ ಪೌರ ಕಾರ್ಮಿಕರಿಗಾಗಿ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣಾ ಶಿಬಿರಕ್ಕೆ ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಭೇಟಿ ನೀಡಿ ಪರಿಶೀಲಿಸಿದರು.
ಕೊರೊನಾ ವಾರಿಯರ್ಸ್‍ಗಳಂತೆ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರಿಗೆ ಕೋವಿಡ್-19 ಪರೀಕ್ಷೆ ಜೊತೆಗೆ ಎಲ್ಲಾ ರೀತಿಯ ಆರೋಗ್ಯ ತಪಾಸಣೆ ನಡೆಸಬೇಕು. ಯಾವುದಾದರೂ ಸಮಸ್ಯೆಗಳು ಕಂಡು ಬಂದಲ್ಲಿ ಜಿಲ್ಲಾಸ್ಪತ್ರೆಗೆ ಶಿಫಾರಸು ಮಾಡಲು ಸೂಚಿಸಿದರು. ಪೌರ ಕಾರ್ಮಿಕರಿಗೆ ಗ್ಲೌಸ್, ಸ್ಯಾನಿಟೈಸರ್, ಮಾಸ್ಕ್ ಸೇರಿದಂತೆ ಇನ್ನಿತರ ಸುರಕ್ಷಾ ಸಾಧನಗಳನ್ನು ನೀಡಬೇಕು. ಅವರಿಗೆ ಉಪಹಾರ ಕೂಡ ನೀಡಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ಇನ್ನು ಕೊರೊನಾ ಸಾಂಕ್ರಾಮಿಕ ರೋಗವಾಗಿರುವುದರಿಂದ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ಸಾಮಾಜಿಕ ಅಂತರ ಕಾಪಾಡಿಕೊಂಡು ಕರ್ತವ್ಯ ನಿರ್ವಹಿಸುವಂತೆ ತಿಳಿಸಿದರು. ಶಿಬಿರದಲ್ಲಿ ಡಾ.ಕೀರ್ತಿ ಹೆಚ್.ಚಿಂತನಹಳ್ಳಿ ಅವರ ನೇತೃತ್ವದ ತಂಡದಿಂದ ಪೌರಕಾರ್ಮಿಕರು ಹಾಗೂ ನಗರಸಭೆಯ ಎಲ್ಲಾ ಸಿಬ್ಬಂದಿಗೆ ಜ್ವರ, ಶ್ವಾಸಕೋಶ ಹಾಗೂ ರಕ್ತದೊತ್ತಡ ತಪಾಸಣೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಪೌರಾಯುಕ್ತ ರಮೇಶ್ ಸುಣಗಾರ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಗಂಗಾಧರಗೌಡ, ಪರಿಸರ ಇಂಜಿನಿಯರ್ ಸಂಗಮೇಶ ಪನಶೆಟ್ಟಿ ಹಾಗೂ ಆರೋಗ್ಯ ನಿರೀಕ್ಷಕರು ಉಪಸ್ಥಿತರಿದ್ದರು.