ಯಾದಗಿರಿ: ಜಿಲ್ಲೆಯ ಗುರಮಿಠಕಲ್ ತಾಲೂಕಿನ ಕುಣೆಗಲ್ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ನೀಡುವ ಪೌಷ್ಟಿಕ ಆಹಾರ ಪದಾರ್ಥಗಳಲ್ಲಿ ಹುಳುಗಳು ಪತ್ತೆಯಾಗಿದ್ದು, ಪೋಷಕರು ಅಂಗನವಾಡಿ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಪೌಷ್ಟಿಕಾಂಶ ಆಹಾರ ಪದಾರ್ಥಗಳನ್ನು ಮಕ್ಕಳಿಗೆ ನೀಡಬೇಕಾದಂತಹ ಗ್ರಾಮದ ಅಂಗನವಾಡಿ ಸಿಬ್ಬಂದಿ, ಮಕ್ಕಳಿಗೆ ಹುಳುಗಳು ತುಂಬಿರುವ ಪದಾರ್ಥಗಳನ್ನು ವಿತರಿಸಿದ್ದಾರೆ. ಇನ್ನು ಆ ಪದಾರ್ಥಗಳನ್ನು ಮಕ್ಕಳು ಮನೆಗೆ ತೆಗೆದುಕೊಂಡು ಹೋಗಿ ತಿನ್ನುತ್ತಿರುವಾಗ ಈ ವಿಷಯ ಬೆಳಕಿಗೆ ಬಂದಿದೆ. ಹುಳು ಹತ್ತಿರುವ ಪದಾರ್ಥಗಳು ವಿತರಣೆ ಮಾಡಿರುವುದರಿಂದ ಹಳೆ ಸ್ಟಾಕ್ ಪದಾರ್ಥಗಳನ್ನು ಸಿಬ್ಬಂದಿ ವಿತರಿಸಿ ಮಕ್ಕಳ ಆರೋಗ್ಯದ ಜೊತೆ ಚಲ್ಲಾಟವಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕೂಡಲೇ ಸಂಬಂಧ ಪಟ್ಟಂತಹ ಅಧಿಕಾರಿಗಳು ಪೌಷ್ಟಿಕ ಹೆಸರಲ್ಲಿ ಮಕ್ಕಳಿಗೆ ಹಳೆ ಸ್ಟಾಕ್ ಆಹಾರ ಪದಾರ್ಥಗಳನ್ನು ವಿತರಿಸಿದ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.