ಯಾದಗಿರಿ: ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಖಾಯಂ ವೈದ್ಯರ ನೇಮಕಾತಿ ಮಾಡುವಂತೆ ಹಾಗೂ ಸೊಳ್ಳೆ ನಿಯಂತ್ರಣಕ್ಕೆ ಫಾಗಿಂಗ್ ಸಿಂಪಡಿಸಲು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಆಗ್ರಹಿಸಿದರು.
ನಗರ ಸಭೆ ಎದುರು ಪ್ರತಿಭಟನೆ ನಡೆಸಿ, ತಾಲೂಕಿನ ನಗನೂರು ಸೇರಿದಂತೆ ಅನೇಕ ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರಿಲ್ಲದೆ ಶುಶ್ರೂಕಿಯರೇ ಎಲ್ಲಾ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ನಾಗನೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಯಾಳಗಿ ಆರೋಗ್ಯ ಕೇಂದ್ರದ ವೈದ್ಯರನ್ನು ಹೆಚ್ಚುವರಿಯಾಗಿ ನೇಮಿಸಲಾಗಿದ್ದು, ವೈದ್ಯರು ವಾರಕ್ಕೆ ಒಂದು ದಿನ ಮಾತ್ರ ಆಸ್ಪತ್ರೆಗೆ ಬರುತ್ತಾರೆ. ಇನ್ನುಳಿದ ದಿನ ವೈದ್ಯರಿಲ್ಲದೆ ರೋಗಿಗಳು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಕೂಡಲೇ ಆಸ್ಪತ್ರೆಗಳಿಗೆ ವೈದ್ಯರನ್ನು ನೇಮಿಸಬೇಕೆಂದು ಸುರಪುರ ತಾಲೂಕು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಒತ್ತಾಯಿಸಿದರು.
ನಗನೂರು ಗ್ರಾಮದಲ್ಲಿರುವ ಆರೋಗ್ಯ ಇಲಾಖೆಯ ವಸತಿ ಗೃಹಗಳನ್ನು ಖಾಸಗಿ ವ್ಯಕ್ತಿಗಳು ಆಕ್ರಮಿಸಿಕೊಂಡು ಅಲ್ಲಿ ಮೇವು ಮತ್ತಿತರೆ ವಸ್ತುಗಳನ್ನು ಸಂಗ್ರಹಿಸಿಡುತ್ತಿದ್ದಾರೆ. ಹೀಗಾಗಿ ಕೂಡಲೇ ವಸತಿ ಗೃಹಗಳ ರಕ್ಷಣೆಗೆ ಮುಂದಾಗಬೇಕು ಎಂದು ಆರೋಗ್ಯಧಿಕಾರಿ ಡಾ.ಆರ್.ವಿ. ನಾಯಕ್ಗೆ ಮನವಿ ಸಲ್ಲಿಸಿದರು.
ಫಾಗಿಂಗ್ ಸಿಂಪಡಿಸಲು ಆಗ್ರಹ:
ನಗರದಲ್ಲೆಡೆ ಚರಂಡಿ ಸ್ವಚ್ಛಗೊಳಿಸದೆ ಹಾಗೆ ಬಿಟ್ಟಿದ್ದರಿಂದ ಸೊಳ್ಳೆಗಳು ಹೆಚ್ಚಾಗಿದ್ದು, ಇದರಿಂದ ಜನರಲ್ಲಿ ಡೆಂಗ್ಯೂ, ಮಲೇರಿಯಾ, ಚಿಕುನ್ ಗುನ್ಯಾದಂತಹ ಮಾರಕ ಕಾಯಿಲೆಗಳು ಹರಡುತ್ತಿವೆ. ಆದ್ದರಿಂದ ನಗರಸಭೆ ವತಿಯಿಂದ ಕೂಡಲೇ ಫಾಗಿಂಗ್ ಯಂತ್ರದ ಮೂಲಕ ಹೊಗೆ ಹರಡಿಸಿ, ಸೊಳ್ಳೆ ನಿಯಂತ್ರಿಸಲು ಮುಂದಾಗಬೇಕು, ಮತ್ತು ಸರಿಯಾದ ಚರಂಡಿ ವ್ಯವಸ್ಥೆ ಕಲ್ಪಿಸುವಸುವಂತೆ ನಗರಸಭೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.