ಸುರಪುರ(ಯಾದಗಿರಿ): ಸುರಪುರ ಪೊಲೀಸ್ ಠಾಣೆಯಲ್ಲಿನ ಕಾನ್ಸ್ಟೇಬಲ್ವೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿರುವುದರಿಂದ ಪೊಲೀಸ್ ಠಾಣೆಯನ್ನ ಸೀಲ್ ಡೌನ್ ಮಾಡಲಾಗಿದೆ.
ಇಂದು ಬೆಳಗ್ಗೆ ಕಾನ್ಸ್ಟೇಬಲ್ಗೆ ಸೋಂಕು ತಗುಲಿರುವುದು ದೃಢವಾಗಿದ್ದು, ವಿಷಯ ಗೊತ್ತಾಗುತ್ತಿದ್ದಂತೆ ಠಾಣೆಯ ಸಿಬ್ಬಂದಿ ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ. ಜು. 3ರಂದು ಠಾಣೆಯ ಎಲ್ಲಾ ಅಧಿಕಾರಿಗಳು ಮತ್ತು ಕಾನ್ಸ್ಟೇಬಲ್ಗಳ ಗಂಟಲು ದ್ರವದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಸದ್ಯ 43 ಜನರ ವರದಿ ಬಂದಿದ್ದು, 42 ಜನರ ವರದಿ ನೆಗೆಟಿವ್ ಬಂದಿದೆ. ಒಬ್ಬರ ವರದಿ ಪಾಸಿಟಿವ್ ಎಂದು ಬಂದಿದೆ. ಇನ್ನೂ 20ಕ್ಕೂ ಹೆಚ್ಚು ಜನರ ವರದಿ ಬರಬೇಕಿದೆ ಎಂದು ತಿಳಿದು ಬಂದಿದೆ.
ಒಬ್ಬರಲ್ಲಿ ಸೋಂಕು ದೃಢವಾಗುತ್ತಿದ್ದಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಲು ಆದೇಶ ಬಂದಿದೆ. ಅದರಂತೆ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದ್ದು, ಎಸ್ಪಿ ಮುಂದಿನ ಆದೇಶದವರೆಗೆ ಸೀಲ್ ಡೌನ್ ಇರಲಿದೆ ಎಂದು ಡಿವೈಎಸ್ಪಿ ವೆಂಕಟೇಶ ಹುಗಿಬಂಡಿ ತಿಳಿಸಿದ್ದಾರೆ.
ಪೊಲೀಸ್ ಠಾಣೆಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ಯಾವುದೇ ದೂರುಗಳಿದ್ದಲ್ಲಿ ಮುಖ್ಯ ದ್ವಾರದಲ್ಲಿ ಹಾಕಲಾಗಿರುವ ಫಲಕದಲ್ಲಿರುವ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಿ ತಮ್ಮ ದೂರನ್ನು ತಿಳಿಸಿದಲ್ಲಿ ಖುದ್ದಾಗಿ ಅಧಿಕಾರಿಗಳೇ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ ಎಂದು ಡಿವೈಎಸ್ಪಿ ತಿಳಿಸಿದ್ದಾರೆ.
ಸದ್ಯ ಪಾಸಿಟಿವ್ ಬಂದಿರುವ ಕಾನ್ಸ್ಟೇಬಲ್ ಟ್ರಾವೆಲ್ ಹಿಸ್ಟರಿ ಕುರಿತು ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ತಿಳಿದು ಬಂದಿದೆ.