ಯಾದಗಿರಿ : ಕಳೆದ ಒಂದೂವರೆ ವರ್ಷದ ಹಿಂದೆ ಅಪಘಾತದಲ್ಲಿ ಕೈ ಮತ್ತು ಕಾಲುಗಳು ಶಕ್ತಿಹೀನವಾಗಿ ಹಾಸಿಗೆ ಹಿಡಿದಿರುವ ಜಿಲ್ಲೆಯ ಮುನಗಲ್ ಗ್ರಾಮದ ಇಂಜಿನಿಯರಿಂಗ್ ಪದವೀಧರ ಭೀಮರೆಡ್ಡಿ ಶಂಕರಪ್ಪ ಅವರ ತಂದೆಗೆ ಸಿಎಂ 5 ಲಕ್ಷ ರೂ. ಪರಿಹಾರದ ಚೆಕ್ ಹಸ್ತಾಂತರಿಸಿದರು.
ನಿನ್ನೆ ನಡೆದ ಜನತಾ ದರ್ಶನದಲ್ಲಿ ಯುವಕನ ತಾಯಿ ಭಾಗವಹಿಸಿ, ಮಗನ ಚಿಕಿತ್ಸೆಗಾಗಿ ಮನೆ, ಹೊಲ, ಎತ್ತುಗಳನ್ನು ಕಳೆದುಕೊಂಡು 30 ಲಕ್ಷಕ್ಕೂ ಹೆಚ್ಚಿನ ಹಣ ಖರ್ಚು ಮಾಡಿದ್ದೇವೆ. ಆದರೂ ಗುಣಮುಖವಾಗಿಲ್ಲ ಎಂದು ದುಃಖ ತೋಡಿಕೊಂಡಿದ್ದರು. ಈ ಕುರಿತು ಅಹವಾಲು ಸ್ವೀಕರಿಸಿದ ಕುಮಾರಸ್ವಾಮಿ ಕೂಡಲೇ ಸ್ಪಂದಿಸಿ, ಇಂದು 5 ಲಕ್ಷ ರೂ. ಪರಿಹಾರದ ಚೆಕ್ ನೀಡಿದ್ದಾರೆ.
ಅರಳಿ ಗಿಡ ನೆಟ್ಟ ಸಿಎಂ :
ಚಂಡರಕಿ ಗ್ರಾಮದಲ್ಲಿ ಸಿಎಂ ಗ್ರಾಮ ವಾಸ್ತವ್ಯ ಮುಕ್ತಾಯಗೊಂಡಿದೆ. ಗ್ರಾಮ ವಾಸ್ತವ್ಯ ಮುಗಿಸಿ ಹೊರಡುವಾಗ ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ಅರಳಿ ಗಿಡ ನೆಟ್ಟಿದ್ದಾರೆ. ಗ್ರಾಮ ವಾಸ್ತವ್ಯದ ನೆನಪಿಗಾಗಿ ಸಿಎಂ ಕುಮಾರಸ್ವಾಮಿ ಒಂದು ಅರಳಿ ಗಿಡ ನೆಟ್ಟು, ಅದಕ್ಕೆ ನೀರು ಹಾಕುವ ಮೂಲಕ ಚಂಡರಕಿ ಗ್ರಾಮದಲ್ಲಿ ವಾಸ್ತವ್ಯ ಮುಕ್ತಾಯಗೊಳಿಸಿದರು.