ಯಾದಗಿರಿ: ಆಂಧ್ರ ಪ್ರದೇಶದಲ್ಲಿರುವ ವಿಶ್ವವಿಖ್ಯಾತಿ ತಿರುಮಲ ತಿರುಪತಿ ವೆಂಕಟೇಶ್ವರ ಸ್ವಾಮಿಗೆ ನವರಾತ್ರಿಯಲ್ಲಿ ಜರುಗುವ ಬ್ರಹ್ಮೋತ್ಸವದಲ್ಲಿ ಸುರಪುರ ಸಂಸ್ಥಾನದವರಿಂದಲೇ ಪ್ರಥಮ ಪೂಜೆ ನೆರವೇರಿಸುವ ಮೂಲಕ ವಿಜೃಂಭಣೆಯಿಂದ ಚಾಲನೆ ನೀಡಲಾಯಿತು.
ಸುರಪುರ ಸಂಸ್ಥಾನಕ್ಕೂ ಮತ್ತು ತಿರುಪತಿಯ ತಿಮ್ಮಪ್ಪನಿಗೂ ಅವಿನಾಭಾವ ಬೆಸುಗೆಯಿದೆ. ಸುರಪುರ ಸಂಸ್ಥಾನದ ಪ್ರತಿನಿಧಿಯಾಗಿ ಪಾಲ್ಗೊಂಡಿದ್ದ ವೇಣುಮಾಧವ ನಾಯಕ್ ಬ್ರಹ್ಮರಥೋತ್ಸವಕ್ಕೆ ಪ್ರಥಮವಾಗಿ ಪೂಜೆ ಮತ್ತು ಆರತಿ ಮಾಡಿ ಚಾಲನೆ ನೀಡಿದರು. ಆಂಧ್ರದ ತಿರುಮಲದಲ್ಲಿ 9 ದಿನಗಳವರೆಗೆ ನಡೆಯುವ ಬ್ರಹ್ಮೋತ್ಸವದಲ್ಲಿ ಮಂಗಳವಾರ ಬೆಳಗ್ಗೆ ಬ್ರಹ್ಮೋತ್ಸವ ರಥೋತ್ಸವದಲ್ಲಿ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯದಂತೆ ದೇವಸ್ಥಾನದ ಅರ್ಚಕರು ಸುರಪುರಂ ಎಂದು ಕೂಗಿದ ನಂತರ ತಿರುಪತಿ ವೆಂಕಟರಮಣನಿಗೆ ಸುರಪುರ ಸಂಸ್ಥಾನದ ವತಿಯಿಂದ ನಡೆಯುವ ಪ್ರಥಮ ಪ್ರಾಶಸ್ತ್ಯದ ಅಗ್ರ ಪೂಜೆ ನೆರವೇರಿಸಲಾಗುತ್ತದೆ.
ಬಳಿಕ ದೇವರಿಗೆ ಮಂಗಳಾರುತಿ ನೆರವೇರಿಸಲಾಗುತ್ತದೆ. ಪೂಜೆಗಾಗಿಯೇ ಸುರಪುರದಿಂದ ತೆರಳಿದ್ದ ಸಂಸ್ಥಾನದ ಅರ್ಚಕರಾದ ವೆಂಕಟೇಶ್ ಆಚಾರ್ಯ ದೇವರು ಪೂಜೆ ಸಲ್ಲಿಸುವ ವೇಳೆ ಉಪಸ್ಥಿತರಿದ್ದರು. ಬಳಿಕ ದೇವಸ್ಥಾನದ ಪ್ರಾಂಗಣದಲ್ಲಿರುವ ಸುರಪುರ ಮಂಟಪ ಜಾಗದ ಹತ್ತಿರ ಎರಡನೇ ಪೂಜೆ ನಡೆಯಿತು.
ಐತಿಹ್ಯ ಹಿನ್ನೆಲೆ: ಸುರಪುರ ಸಂಸ್ಥಾನದ ಅರಸರು ತಿರುಪತಿ ವೆಂಕಟೇಶ್ವರ ದೇವರಲ್ಲಿ ಅಪಾರ ಭಕ್ತಿಯುಳ್ಳವರಾಗಿದ್ದರು. ತಿರುಪತಿಯ ವೆಂಕಟರಮಣ ಇಲ್ಲಿನ ಅರಸು ಮನೆತನದವರ ಭಕ್ತಿಗೆ ಮೆಚ್ಚಿ ನೀವು ತಿರುಪತಿಗೆ ಬರುವುದು ಬೇಡ. ನಾನೇ ಅಲ್ಲಿ ವೇಣುಗೋಪಾಲಸ್ವಾಮಿ ರೂಪದಲ್ಲಿ ನೆಲೆಸಿ ನಿಮಗೆ ದರ್ಶನ ನೀಡುತ್ತೇನೆ ಎಂದು ಅಭಯ ನೀಡಿರುತ್ತಾನೆ. ಅದರಂತೆ ಅರಸು ಮನೆತನದ ಯಾರೊಬ್ಬರು ತಿರುಮಲಕ್ಕೆ ಬರುವುದಿಲ್ಲ, ಆದರೇ ನವರಾತ್ರಿಯ ಬ್ರಹ್ಮೋತ್ಸವ ಪೂಜೆಗೆ ಸುರಪುರ ಅರಸು ಮನೆತನದಿಂದ ರಾಜಪ್ರತಿನಿಧಿಗಳನ್ನ ಕಳುಹಿಸಿಕೊಡಲಾಗುತ್ತದೆ ಎಂಬ ಐತಿಹ್ಯವಿದೆ.
ಇದನ್ನೂ ಓದಿ: ತಿರುಪತಿಗೆ ಸಿಜೆಐ ಉದಯ್ ಉಮೇಶ್ ಲಲಿತ್ ದಂಪತಿ ಭೇಟಿ: ಹನುಮಂತ ವಾಹನ ಸೇವೆಯಲ್ಲಿ ಭಾಗಿ