ಸುರಪುರ: ಇಂದು ಸುರಪುರ ತಾಲೂಕಿನ ಕೊಡಲಿಗೆ, ಬೈಚಬಾಳ, ಹೆಗ್ಗಣದೊಡ್ಡಿ, ಕನ್ನಳ್ಳಿ ಸೇರಿದಂತೆ ಅನೇಕ ಗ್ರಾಮಗಳ 500ಕ್ಕೂ ಹೆಚ್ಚು ಜನ ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪಕ್ಷವನ್ನು ತೊರೆದು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಬಿಜೆಪಿ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳಿಸುವ ಕಾರಣದಿಂದಾಗಿ ಕೊಡಲಿಗೆ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಸಮಾವೇಶವನ್ನು ಹಮ್ಮಿಕೊಂಡು ಕೊಡಲಿಗೆ ಗ್ರಾಮದ ಬಿಜೆಪಿ ಪಕ್ಷದ ಪ್ರಬಲ ಮುಖಂಡರಲ್ಲಿ ಒಬ್ಬರಾದ ಬಾಪುಗೌಡ ಮಾಲಿ ಪಾಟೀಲ್ ಹಾಗೂ ಶರಣಗೌಡ ಸೇರಿದಂತೆ ಅನೇಕ ಮುಖಂಡರನ್ನು ಬರ ಮಾಡಿಕೊಂಡರು.
ಎಲ್ಲರನ್ನೂ ಪಕ್ಷಕ್ಕೆ ಬರಮಾಡಿಕೊಂಡ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ಇಂದಿನ ಸರ್ಕಾರ ರೈತರು, ಕಾರ್ಮಿಕರು, ಶ್ರಮಿಕರನ್ನು ಮರೆತಿದೆ. ಕಳೆದ ಎರಡು ವರ್ಷದಿಂದ ಸತತವಾಗಿ ನೆರೆ ಹಾವಳಿ ಹಾಗೂ ಮಹಾ ಮಳೆಯಿಂದಾಗಿ ರೈತರು ಸಂಕಷ್ಟದಲ್ಲಿದ್ದು ಅನ್ನದಾತನಿಗೆ ಇದುವರೆಗೂ ಕೂಡ ಸರ್ಕಾರದಿಂದ ಪರಿಹಾರ ನೀಡಿಲ್ಲ ಹಾಗೂ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಸೂರು ಕಲ್ಪಿಸದ ಸರ್ಕಾರ ಎಲ್ಲರ ವಿಶ್ವಾಸ ಕಳೆದುಕೊಂಡಿದೆ ಎಂದರು.
ಹಿಂದೆ ಕಾಂಗ್ರೆಸ್ ಸರ್ಕಾರದ ಸಂದರ್ಭದಲ್ಲಿ ಸಿದ್ದರಾಮಯ್ಯನವರು ಅನೇಕ ಯೋಜನೆಗಳನ್ನು ನೀಡಿದ್ದಾರೆ. ಅಲ್ಲದೆ ನಾನು ಕೂಡ ಶಾಸಕನಾಗಿದ್ದ ಸಂದರ್ಭದಲ್ಲಿ ತಾಲೂಕಿನ ಅಭಿವೃದ್ಧಿಗೆ ಸಾಕಷ್ಟು ಕೆಲಸಗಳನ್ನು ಮಾಡಿದ್ದು ಇಂದಿಗೂ ಕೂಡ ಜನರಿಗೆ ಕಾಣುವಂತಿದೆ ಎಂದರು.
ಕಾರ್ಯಕ್ರಮ ಆರಂಭಕ್ಕೂ ಮುನ್ನ ಹೆಗ್ಗಣದೊಡ್ಡಿ ಯಿಂದ ಕೊಡಲಿಗೆವರೆಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬೃಹತ್ ಬೈಕ್ ರ್ಯಾಲಿ ನಡೆಸಿ ಮುಖಂಡರನ್ನು ಕಾರ್ಯಕ್ರಮಕ್ಕೆ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಮುಖಂಡರಾದ ವಿಠ್ಠಲ ಯಾದವ್, ರಾಜಾ ರೂಪ ಕುಮಾರ್ ನಾಯಕ, ರಾಜಾ ವೇಣುಗೋಪಾಲ ನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ್ ಬಾಚಿಮಟ್ಟಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.